More

    ಬಂದರು ವಿಸ್ತರಣೆ ವಿರೋಧಿಸಿ ಪ್ರತಿಭಟನೆ

    ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಟ್ಯಾಗೋರ್ ಕಡಲ ತೀರದಲ್ಲಿ ಉದ್ದದ ಮಾನವ ಸರಪಳಿ ರಚಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

    ಸುಮಾರು 1 ಕಿ.ಮೀ. ಉದ್ದದವರೆಗೆ ಒಂದು ಸಾವಿರಕ್ಕೂ ಅಧಿಕ ಜನರು ಕಡಲ ತೀರಕ್ಕೆ ಅಡ್ಡಲಾಗಿ ಪರಸ್ಪರ ಕೈ ಹಿಡಿದು ಮೌನವಾಗಿ ನಿಂತು ಮತ ಪ್ರದರ್ಶನ ನಡೆಸಿದರು. ಕಡಲ ತೀರ ಉಳಿಸಿ ಎಂಬ ಫಲಕಗಳನ್ನು ಪ್ರದರ್ಶಿಸಿದರು.

    ಮಾಜಿ ಶಾಸಕ ಸತೀಶ ಸೈಲ್ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಹಿಂದೆ ಕಡಲ ತೀರ ಉಳಿಸಲು ತೀವ್ರ ಹೋರಾಟ ನಡೆಸಿದ್ದೇವೆ. ಈಗ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.

    ಮೀನುಗಾರರ ಮುಖಂಡ ಕೆ.ಟಿ. ತಾಂಡೇಲ ಮಾತನಾಡಿ, ಸಾಗರಮಾಲಾ ಯೋಜನೆಯಡಿ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆ ಸಮಗ್ರ ಯೋಜನೆಯಾಗಿದೆ. ಸದ್ಯ 880 ಮೀಟರ್​ನಷ್ಟು ಅಲೆ ತಡೆಗೋಡೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಮೀನುಗಾರಿಕೆ ಸಚಿವರ ಜತೆ ಸಭೆ ಮಾಡಿದೆವು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದೆವು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇವೆ. ಆದರೆ, ಮೀನುಗಾರರ ಬೇಡಿಕೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಕೀಲ ಬಿ.ಎಸ್. ಪೈ, ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಶಾ ಎಲಕಪಾಟಿ, ಮೀನುಗಾರ ಮುಖಂಡರಾದ ರಾಜು ತಾಂಡೇಲ, ವಿನಾಯಕ ಹರಿಕಂತ್ರ, ಚೇತನ ಹರಿಕಂತ್ರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಸದ್ಯ ನಮ್ಮ ಸಂಚಾರಕ್ಕೆ ಸ್ವಚ್ಛ ಗಾಳಿ ಸೇವಿಸಲು ಸುಂದರ, ವಿಸ್ತಾರ ಕಡಲ ತೀರ ಇದೆ. ಬಂದರು ಅಭಿವೃದ್ಧಿಯಾದಲ್ಲಿ ಕಡಲ ತೀರ ಮಾಯವಾಗಲಿದೆ. ವಾಯು ವಿಹಾರಕ್ಕೆ ಗೋವಾಕ್ಕೆ ಹೋಗಬೇಕಾದೀತು.
    ಡಾ. ಶಿವಕುಮಾರ ಹರಗಿ ಕಡಲ ಜೀವಶಾಸ್ತ್ರಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts