More

    ಬಂದರು ನಿರ್ಮಾಣ ವಿರೋಧಿಸಿ ಬೃಹತ್ ಪ್ರತಿಭಟನೆ

    ಹೊನ್ನಾವರ: ತಾಲೂಕಿನ ಕಾಸರಕೋಡದಲ್ಲಿ ‘ವಾಣಿಜ್ಯ ಬಂದರು ಬೇಡವೇ ಬೇಡ’ ಎಂಬ ಹಕ್ಕೊತ್ತಾಯಕ್ಕೆ ಮುಂದಾಗಿರುವ ಮೀನುಗಾರರು ಕರಾವಳಿಯಾದ್ಯಂತ ಬುಧವಾರ ಮೀನುಗಾರಿಕೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ವಿವಿಧ ಮೀನುಗಾರಿಕಾ ಸಂಘಟನೆಗಳ ನೇತೃತ್ವದಲ್ಲಿ ಕಾಸರಕೋಡ ಟೊಂಕಾದಿಂದ ಪಟ್ಟಣದ ಪೊಲೀಸ್ ಪರೇಡ್ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮೀನುಗಾರ ಮುಖಂಡರು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಷ್ಟ್ರೀಯ ಮೀನುಗಾರರ ಸಂಘಟನೆಯ ಅಧ್ಯಕ್ಷ ಯು.ಆರ್. ಸಭಾಪತಿ ಮಾತನಾಡಿ, ‘ಕೇಂದ್ರ ಸರ್ಕಾರವು ಬಂದರು, ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಮೀನುಗಾರ ಸಮಾಜದವರು ಹೋರಾಟ ಮಾಡಲು ಹೋದರೆ ವಿರೋಧ ಮಾಡುತ್ತಾರೆ. ಹಿಂದುತ್ವದ ವಿಚಾರವನ್ನು ಹೇಳಿಕೊಂಡು ನಮ್ಮ ಸಮಾಜವನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಸರ್ಕಾರ ಸ್ಪಂದಿಸುತ್ತಿಲ್ಲ. ವಾಣಿಜ್ಯ ಬಂದರು ಕಾಮಗಾರಿ ನಿಲ್ಲುವವರೆಗೂ ಹೋರಾಟ ಮಾಡುತ್ತೇವೆ’ ಎಂದರು.

    ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ, ‘ಬಿಜೆಪಿ ಸರ್ಕಾರ ಹೊನ್ನಾವರ ಬಂದರನ್ನು ಖಾಸಗಿಯವರಿಗೆ ಮಾರಿದೆ. 2010ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಂದರು ನಿರ್ಮಾಣ ಯೋಜನೆಯನ್ನು ಖಾಸಗಿ ಕಂಪನಿಗೆ ಕೊಟ್ಟಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಖಾಸಗಿ ಬಂದರು ನಿರ್ಮಾಣ ನಡೆಯುತ್ತಿದೆ. ಹಾಲಿ ಶಾಸಕರು ಖಾಸಗಿ ಬಂದರು ನಿರ್ವಣವನ್ನು ಬಂದ್ ಮಾಡಿಸುವ ಮೂಲಕ ಮೀನುಗಾರರ ಪರವಾಗಿದ್ದೇವೆ ಎಂದು ಸಾಬೀತು ಪಡಿಸಲಿ’ ಎಂದು ಸವಾಲೆಸೆದರು. ಮಾಜಿ ಶಾಸಕಿ ಶಾರದಾ ಶೆಟ್ಟಿ, ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಾಮಾ ಮೊಗೇರ, ಸಿಐಟಿಯು ಪದಾಧಿಕಾರಿ ಯಮುನಾ ಗಾಂವಕರ ಮತ್ತಿತರರು ಮಾತನಾಡಿದರು.

    ಹೊನ್ನಾವರ ಮೀನುಗಾರರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ಜಿ. ತಾಂಡೇಲ, ತಾಲೂಕು ಪರ್ಶಿಯನ್ ಬೋಟ್ ಮಾಲೀಕರ ಯೂನಿಯನ್ ಅಧ್ಯಕ್ಷ ಹಮ್ಜಾ ಪಟೇಲ, ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ರಾಮಚಂದ್ರ ಹರಿಕಾಂತ, ಸಗಟು ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣಪತಿ ತಾಂಡೇಲ, ಕರಾವಳಿ ಮೀನುಗಾರ ಕಾರ್ವಿುಕ ಸಂಘದ ಅಧ್ಯಕ್ಷ ರಾಜೇಶ ಈಶ್ವರ ತಾಂಡೇಲ, ಸಿಐಟಿಯು ಮುಖಂಡ ತಿಲಕ ಗೌಡ, ರಾಷ್ಟ್ರೀಯ ಮೀನುಗಾರ ಸಂಘಟನೆಯ ಅಜಿತ ತಾಂಡೇಲ, ಜಯಶ್ರೀ ಕೋಟ್ಯನ್, ಅನಿತಾ ಮಾಪಾರಿ, ವಿವನ್ ಫರ್ನಾಂಡೀಸ್, ಜಗದೀಶ ತಾಂಡೇಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಮೀನುಗಾರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮನವಿ ವಾಚಿಸಿದರು. ವೇದಿಕೆಯಲ್ಲಿದ್ದ ಮುಖಂಡರೆಲ್ಲ ಸೇರಿ ಮನವಿಯನ್ನು ಉಪವಿಭಾಗಾಕಾರಿಗಳಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ಭಟ್ಕಳ ಉಪ ವಿಭಾಗಾಧಿಕಾರಿ ಶಾಜಿದ್ ಮುಲ್ಲಾ ಅವರು ರಾಜ್ಯಪಾಲರಿಗೆ ಕಳಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts