More

    ಫಲ-ಪುಷ್ಪ ಪ್ರದರ್ಶನಕ್ಕೆ ಗಾಜಿನಮನೆ ಸಜ್ಜು  * ಚಂದ್ರಯಾನ-3 ಪ್ರಮುಖ ಆಕರ್ಷಣೆ * ಇಂದಿನಿಂದ ನಾಲ್ಕು ದಿನಗಳ ಕಾಲ ಕಣ್ಣಿಗೆ ಹಬ್ಬ 

    ದಾವಣಗೆರೆ: ಒಂದೆಡೆ ವಿಶ್ವಕಪ್ ಕ್ರಿಕೆಟ್, ಇನ್ನೊಂದೆಡೆ ದೀಪಾವಳಿ ಹಬ್ಬ. ಇದರ ನಡುವೆಯೇ ದಾವಣಗೆರೆ ಜಿಲ್ಲೆಯ ಜನರಿಗೆ ಫಲ-ಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುವ ಅವಕಾಶ!
    ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನ. 13ರಿಂದ 16ರ ವರೆಗೆ ಗಾಜಿನ ಮನೆಯಲ್ಲಿ ಆಯೋಜಿಸಿರುವ ಪ್ರದರ್ಶನ ದೀಪಾವಳಿ ಹಬ್ಬದ ಸಡಗರವನ್ನು ಹೆಚ್ಚಿಸಲಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಜಿ.ಸಿ.ರಾಘವೇಂದ್ರ ಪ್ರಸಾದ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದರು.
    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ ಉಡಾವಣೆ ಮಾಡಿದ ಚಂದ್ರಯಾನ-3 ಕಾರ್ಯಾಚರಣೆಯ ಪುಷ್ಪ ಕಲಾಕೃತಿಯು 25 ಅಡಿ ಎತ್ತರದಲ್ಲಿ, 3 ಲಕ್ಷ ಹೂವುಗಳಲ್ಲಿ ಅರಳಲಿರುವುದು ಪ್ರದರ್ಶನದ ಹೈಲೈಟ್.
    2 ಲಕ್ಷ ಸೇವಂತಿಗೆ, 50 ಸಾವಿರ ಕೆಂಗುಲಾಬಿ, 20 ಸಾವಿರ ಆರ್ಕಿಡ್ಸ್, ಕಾರ್ನೇಷನ್, ಆಂಥುರಿಯಮ್ಸ್, ಲಿಲಿಯ್ಸ್, ಗಿಪ್ಸೋಫಿಲಾ ಹೂವುಗಳ ಅನಾವರಣವಾಗಲಿದೆ. 11 ಅಡಿ ಅಗಲದ ಪಿಎಸ್‌ಎಲ್‌ವಿ ಮಾದರಿ, 9 ಅಡಿ ಎತ್ತರದ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳು ಕಣ್ಣಿಗೆ ಹಬ್ಬ ನೀಡಲಿವೆ.
    ಕರ್ನಾಟಕ ಎಂದು ನಾಮಾಂಕಿತಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದ ಭೂಪಟವನ್ನು ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗುವುದು. ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ನಾಡುನುಡಿಗೆ ಸಂಬಂಧಿಸಿದಂತೆ ರಚಿಸಿದ ಪೇಂಟಿಂಗ್ಸ್, ಮರ ಹಾಗೂ ಕಲ್ಲಿನ ಕೆತ್ತನೆಯ ಶಿಲ್ಪಕಲಾಕೃತಿಗಳು, ಗಣ್ಯರ ಕುರಿತಾದ ಪೇಪರ್ ಕಟಿಂಗ್‌ಗಳು ಗಮನ ಸೆಳೆಯಲಿವೆ.
    ಥರ್ಮಾಕೋಲ್‌ನಲ್ಲಿ ನಿರ್ಮಿಸಲಾದ 16 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದ ಶಿವನಂದಿ ವಿಗ್ರಹ ದರ್ಶನವಾಗಲಿದೆ. ಏಳಡಿ ಎತ್ತರದ ಭಾರತದ ಭೂಪಟ, ಎಂಟಡಿ ಎತ್ತರದ ಐಸಿಸಿ ವಿಶ್ವಕಪ್, 10 ಅಡಿ ಎತ್ತರದ ಕಾಫಿ ಕಪ್ ಸೇವಂತಿಗೆ-ಗುಲಾಬಿ ಹೂವುಗಳಿಂದ ಅಲಂಕೃತವಾಗುತ್ತಿವೆ.
    ಸಾಲ್ವಿಯಾ, ಪೆಟುನಿಯಾ, ಬೆಗೋನಿಯಾ, ಟೋರೆನಿಯಾ, ಜಿನಿಯಾ, ಸೇವಂತಿಗೆ, ಚೆಂಡು ಹೂವು, ಪೆಂಟಾಸ್, ಸೆಲೋಸಿಯಾ, ಡೇರೆ, ಡಯಾಂಥಸ್, ಸಾಲ್ಸಮ್, ಸ್ಟ್ರೋ ಬಿಲಾಂಥಸ್, ಗೆಜೆನಿಯಾ, ಟೆಕೋಮಾ, ಅಡೇನಿಯಮ್, ಸೇಡಂ, ಕೋಲಿಯಸ್, ವರ್ಬೆನಾ ಮತ್ತಿತರೆ ಹೂವುಗಳು,. 46 ಬಗೆಯ 15 ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಗಿಡಗಳ ತೋಟವೇ ಅರಳಲಿದೆ. ರೈತರು ಬೆಳೆದ ಸೀತಾಫಲ, ರಾಮಫಲ ಇತ್ಯಾದಿ ಹಣ್ಣುಗಳ ಪ್ರದರ್ಶನವೂ ಇರಲಿದೆ.
    ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ. ಸಂಜೆ 6ರಿಂದ ಸಂಗೀತ ಕಾರಂಜಿಯ ರಸದೌತಣವಿದೆ. ಒಟ್ಟು ಪ್ರದರ್ಶನಕ್ಕೆ ವಯಸ್ಕರಿಗೆ 30 ರೂ. ಮಕ್ಕಳಿಗೆ 10 ರೂ. ಪ್ರವೇಶಶುಲ್ಕ ನಿಗದಿಪಡಿಸಲಾಗಿದೆ. 13, 14ರಂದು ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ.
    ಪ್ರದರ್ಶನಕ್ಕೆ ಸುಮಾರು 8ರಿಂದ 10 ಲಕ್ಷ ರೂ. ವೆಚ್ಚವಾಗುತ್ತಿದೆ. ಬೆಂಗಳೂರಿನ ದಿನೇಶ್ ಮತ್ತವರ ತಂಡ ಕಳೆದ ಐದು ದಿನದಿಂದ ಎಲ್ಲ ಕಲಾಕೃತಿಗಳನ್ನು ಸಿದ್ಧಪಡಿಸುತ್ತಿದೆ. ನ. 13ರಂದು ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಪ್ರದರ್ಶನಕ್ಕೆ ಚಾಲನೆ ನೀಡುವರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts