More

    ಪ್ರಿಯದರ್ಶಿನಿ ಮಳಿಗೆಗಳು ಮೇಲ್ದರ್ಜೆಗೆ

    ಹುಬ್ಬಳ್ಳಿ: ಪ್ರಿಯದರ್ಶಿನಿ ಬ್ರ್ಯಾಂಡ್ ಮೂಲಕ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಕೆ. ಸವದಿ ಹೇಳಿದರು.

    ಇಲ್ಲಿಯ ವಿದ್ಯಾನಗರ ನೇಕಾರ ಭವನದ ನಿಗಮದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

    ಸರ್ಕಾರದ 2020- 1ನೇ ಆಯವ್ಯಯದಲ್ಲಿ ಕೈಮಗ್ಗ ನಿಗಮದ ಜಿ.ಐ. ಟ್ಯಾಗ್ ಹೊಂದಿರುವ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ 2 ಕೋಟಿ ರೂ. ಮೀಸಲಿಡಲಾಗಿದೆ. ಆನೇಕಲ್, ತಿಪಟೂರು, ಕೊಳ್ಳೆಗಾಲ, ಕೊಲ್ಲೂರು, ಮೊಳಕಾಲ್ಮೂರು, ಚಿಂತಾಮಣಿಗಳಲ್ಲಿ ರೇಷ್ಮೆ ಕೈಮಗ್ಗಗಳು ಇವೆ. ವಿವಿಧ ರೇಷ್ಮೆ ಉತ್ಪನ್ನಗಳನ್ನು ಪ್ರಿಯದರ್ಶಿನಿ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಪ್ರಮುಖ ನಗರಗಳಲ್ಲಿರುವ ಪ್ರಿಯದರ್ಶಿನಿ ಮಳಿಗೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವಾರ್ಷಿಕ 10 ಕೋಟಿ ರೂ. ವಹಿವಾಟು ಪ್ರಿಯದರ್ಶಿನಿ ಹ್ಯಾಂಡ್​ಲೂಮ್ಸ್ ಮೂಲಕ ನಡೆಯುತ್ತಿದೆ ಎಂದರು.

    ಆನ್​ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿಗಮದಲ್ಲಿ 9 ಸಾವಿರ ನೊಂದಾಯಿತ ನೇಕಾರರಿದ್ದು 6 ಸಾವಿರ ಜನ ಕಾರ್ಯ ನಿರತರಾಗಿದ್ದಾರೆ. ಬನಹಟ್ಟಿ, ರಬಕವಿ, ರಾಮದುರ್ಗ, ಇಳಕಲ್, ರಾಣೆಬೆನ್ನೂರು, ಕಲಬುರ್ಗಿ, ಗದಗ-ಬೆಟಗೇರಿ, ಮೊಳಕಾಲ್ಮೂರು, ಮಂಗಳೂರು ಸೇರಿದಂತೆ 5,183 ಕೈಮಗ್ಗಗಳು ಕಾರ್ಯನಿರತವಾಗಿವೆ. ನೇಕಾರರಿಗೆ ದಿನವೊಂದಕ್ಕೆ 150 ರಿಂದ 200 ರೂ. ಕೂಲಿ ದೊರೆಯುತ್ತಿದೆ ಎಂದರು.

    ಬಾಕಿ ಬರಬೇಕಿದೆ:

    ಶಿಕ್ಷಣ ಇಲಾಖೆಯಿಂದ ನಿಗಮಕ್ಕೆ ಅಂದಾಜು 21 ಕೋಟಿ ರೂ. ಬಾಕಿ ಸಂದಾಯವಾಗಬೇಕಿದೆ. ಮುಂದಿನ ಐದು ವರ್ಷಗಳಿಗೆ ಶಿಕ್ಷಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿಯೂ 8 ಲಕ್ಷ ಮೀಟರ್ ಬಟ್ಟೆಯನ್ನು ಕೈಮಗ್ಗದ ಮೂಲಕ ನೇಯಲಾಗಿದೆ. ಹಲವಾರು ವರ್ಷಗಳಿಂದ ನಿಗಮ 155 ಕೋಟಿ ರೂಪಾಯಿ ಸಂಚಿತ ನಷ್ಟದಲ್ಲಿದೆ. ನಷ್ಟ ಸರಿದೂಗಿಸಲು ಸಹಾಯ ಮಾಡುವಂತೆ ಸರ್ಕಾರಕ್ಕೆ ಕೋರಲಾಗುವುದು. ನಿಗಮದಲ್ಲಿ 171 ಮಂದಿ ಕಾಯಂ ಸಿಬ್ಬಂದಿ, 80 ಮಂದಿ ನಿಯೋಜನೆ ಹಾಗೂ 126 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಸವದಿ ವಿವರಿಸಿದರು.

    ಟೆಂಡರ್ ವಿನಾಯಿತಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೈಮಗ್ಗ ನಿಗಮದ ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ಹಲವು ಇಲಾಖೆಗಳಿಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಿದೆ. ನಿಗಮದ ಸಗಟು ವಹಿವಾಟು 80 ಕೋಟಿ ರೂ.ಗಳಾಗಿದೆ ಎಂದರು.

    ಶಾಸಕ ಅರವಿಂದ ಬೆಲ್ಲ್ಲ, ನಿಗಮದ ಜಂಟಿ ನಿರ್ದೇಶಕ ಎಸ್.ಎಸ್. ಪಟಕೆ ಉಪಸ್ಥಿತರಿದ್ದರು.

    ನಿಗಮದಿಂದ ನೇಕಾರರಿಗೆ ವಿಶೇಷ ಮಾಸಿಕ ವೃದ್ಧಾಪ್ಯ ವೇತನ, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನೇಕಾರರ ಕಾಲನಿಗಳಿಗೆ ಮೂಲಸೌಕರ್ಯ ಒದಗಿಸುವುದು, ನಿಗಮದಲ್ಲಿ ನೋಂದಾಯಿತ ನೇಕಾರರಿಗೆ ವಿಶೇಷ ಜೀವವಿಮೆ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ.

    | ಸಿದ್ದು ಸವದಿ, ಕೆಎಚ್​ಡಿಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts