More

    ಜನತಾ ದರ್ಶನಕ್ಕೆ ನೀರಸ ಪ್ರತಿಕ್ರಿಯೆ

    ತರೀಕೆರೆ: ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜನತಾ ದರ್ಶನದಲ್ಲಿ 82 ಸಾರ್ವಜನಿಕ, 74 ವೈಯಕ್ತಿಕ ಅರ್ಜಿಗಳು ಸ್ವೀಕೃತವಾದವು. ಈ ಪೈಕಿ ಅರಣ್ಯ, ಕಂದಾಯ ಇಲಾಖೆ ಮಾತ್ರವಲ್ಲ, ಮೆಸ್ಕಾಂ ಸಂಬಂಧಿತ ಅರ್ಜಿಗಳೇ ಹೆಚ್ಚಾಗಿದ್ದವು.

    ಜಿಲ್ಲಾ ಜನತಾ ದರ್ಶನಕ್ಕೆ ಸಾರ್ವಜನಿಕರು ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರಿಂದ ಕಾಟಾಚಾರಕ್ಕೆ ನಡೆಸಿದಂತಿತ್ತು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೇ ಕಿಕ್ಕಿರಿದು ಜಮಾಯಿಸಿದ್ದರು. ಆದರೂ ಕೆಲ ಪ್ರಕರಣಗಳನ್ನು ಸ್ಥಳದಲ್ಲೇ ಪರಿಹರಿಸಿ, ಸಮಸ್ಯೆಗಳಿಗೆ ಸ್ಪಂದಿಸಿದರು.
    ಶಿವಪುರ ಸಮೀಪದ ಕೆ.ಗೊಲ್ಲರಹಟ್ಟಿಯಲ್ಲಿ ನನ್ನ ಪತಿ ದಾಸಪ್ಪ ಹೆಸರಿಗೆ ಜಮೀನಿದೆ. ಇವರು ಈಗಾಗಲೇ ಮೃತಪಟ್ಟಿದ್ದಾರೆ. ಪತಿ ಹೆಸರಿನಲ್ಲಿರುವ ಜಮೀನಿಗೆ ಹಕ್ಕುಪತ್ರ ಇದೆಯಾದರೆ, ಖಾತೆ ಬದಲಾವಣೆ ಮಾಡಲು ಕಚೇರಿಯಲ್ಲಿ ಮೂಲ ಕಡತವಿಲ್ಲ. ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಜಯಮ್ಮ ಮನವಿ ಮಾಡಿದರು. ಪ್ರತಿಕ್ರಿಯಿಸಿದ ತಹಸೀಲ್ದಾರ್ ವಿ.ಎಸ್.ರಾಜೀವ್, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವರು, ಪರಿಶೀಲಿಸುವ ಅಗತ್ಯವಿಲ್ಲ. ಏನಿದ್ದರೂ ಸಮಸ್ಯೆಗೆ ಪರಿಹಾರ ಸಿಗಬೇಕು. 15 ದಿನದಲ್ಲಿ ಮೂಲ ಕಡತ ತಯಾರಿಸಿ ಖಾತೆ ಮಾಡಿಕೊಡದಿದ್ದರೆ ನಿಮ್ಮ ಮೇಲೆಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಗ್ರಾಮದ ಸುದೀಪ್ ಮಾತನಾಡಿ, ನನ್ನ ತಂದೆ ಶಿವಕುಮಾರ್ ಇತ್ತೀಚಿಗೆ ಜಮೀನಿನ ಸಮೀಪವಿರುವ ವಿದ್ಯುತ್ ಪರಿವರ್ತಕದ ಬಳಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ. ಇದಕ್ಕೆ ಮೆಸ್ಕಾಂ ನಿರ್ಲಕ್ಷೃವೇ ಕಾರಣ. ತಂದೆ ಸಾವಿನಿಂದ ಜೀವನ ಕಷ್ಟಕರವಾಗುತ್ತಿದೆ. ಸೂಕ್ತ ಪರಿಹಾರ ಕೊಡಿಸಿ ಎಂದು ಅಳಲು ತೋಡಿಕೊಂಡರು. ಯುವಕನ ಸಮಸ್ಯೆ ಆಲಿಸಿದ ಸಚಿವ, ಆದೇನೇ ಆಗಲಿ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಆದಷ್ಟು ಬೇಗ ಪಾವತಿಸಿ ಎಂದು ಚಿಕ್ಕಮಗಳೂರು ಮೆಸ್ಕಾಂ ಎಇಇಗೆ ತಾಕೀತು ಮಾಡಿದರು.
    ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ಬರಪೀಡಿತ ಘೋಷಿಸಲಾಗಿದೆ. ಕೆಳ ಹಂತದಲ್ಲಿ ಸಮಸ್ಯೆ ಹೆಚ್ಚಾದರೆ ಹೋಬಳಿ ಮಟ್ಟದಲ್ಲೂ ಜನಸಂಪರ್ಕ ಸಭೆ ಆಯೋಜಿಸಿ ಬಗೆಹರಿಸಲಾಗುವುದು. ಆಯಾ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗೆ ತಕ್ಕಂತೆ ಸ್ಪಂದನೆ, ಸಕಾರಾತ್ಮಕ ಉತ್ತರ ನೀಡಿದರೆ ಜನತಾ ದರ್ಶನದ ಉದ್ದೇಶ ಈಡೇರುತ್ತದೆ ಎಂದರು.
    ಗ್ರಾಮ ಲೆಕ್ಕಾಧಿಕಾರಿ ಹಾಗೂ ಸರ್ವೇಯರ್‌ಗಳಿಂದ ಜನರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಎಲ್ಲೆಡೆ ತುಂಬಿದೆ. ಜಿಲ್ಲೆಯಲ್ಲಿ ಪೋಡಿ ಸಂಬಂಧಿ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ನಿಸ್ವಾರ್ಥದಿಂದ ಜವಾಬ್ದಾರಿ ನಿಭಾಯಿಸಬೇಕು. ಲಂಚ ಕೇಳುವ ಮತ್ತು ಕಿರುಕುಳ ನೀಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಸಾಕ್ಷಿ, ಆಧಾರ ಸಮೇತ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಾವಷ್ಟೇ ಅಲ್ಲ, ನಿಷ್ಠಾವಂತ ಅಧಿಕಾರಿಗಳು ಕೂಡ ಇಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
    ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರಿಂದ ಸ್ವೀಕರಿಸುವ ಕುಂದು ಕೊರತೆಗಳ ಅರ್ಜಿ ಐಪಿಜಿಆರ್‌ಎಸ್‌ನಲ್ಲಿ ದಾಖಲಿಸಲಾಗುತ್ತದೆ. ಹಂತ ಹಂತವಾಗಿ ಸಮಸ್ಯೆ ಇತ್ಯರ್ಥಗೊಳ್ಳಲಿದೆ. ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಐದು ಗ್ಯಾರಂಟಿಗಳ ಪೈಕಿ ಯುವ ನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಜ.12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
    ಕೈಕೊಟ್ಟ ಕರೆಂಟ್: ಇಂಧನ ಖಾತೆ ಸಚಿವರೂ ಆದ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ಸೊಕ್ಕೆ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ಪ್ರಾರ್ಥನೆ ಮುಗಿಸಿ ಅದೇ ಶಾಲೆಯ ಮಕ್ಕಳು ನಾಡಗೀತೆ ಹಾಡಲು ಪ್ರಾರಂಭಿಸುತ್ತಿದ್ದಂತೆ ವಿದ್ಯುತ್ ಕಡಿತಗೊಂಡಿತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಮತ್ತೊಮ್ಮೆ ಕರೆಂಟ್ ಕಡಿತಗೊಂಡಾಗ ಸ್ವತಃ ಸಚಿವರೇ ಮುಜುಗರ ಅನುಭವಿಸುವಂತಾಯಿತು.
    ಕಿರಿಕಿರಿ ಮೈಕ್: ಜಿಲ್ಲಾ ಜನತಾ ದರ್ಶನದುದ್ದಕ್ಕೂ ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮಾತ್ರವಲ್ಲ, ಸಭಾಂಗಣದಲ್ಲಿ ಅಲ್ಲಲ್ಲಿ ಕುಳಿತಿದ್ದ ಅಧಿಕಾರಿಗಳು, ಅಹವಾಲು ಸಲ್ಲಿಸಲು ಆಗಮಿಸಿದ್ದ ಸಾರ್ವಜನಿಕರ ಕೈಯಲ್ಲಿದ್ದ ಮೈಕ್ ಮಾತಾಡುವ ಮುಂಚೆಯೇ ಕಿರಿಕಿರಿ ಉಂಟು ಮಾಡಿತು. ಜನ ಸಮಸ್ಯೆ ಹೇಳಿಕೊಳ್ಳುವಾಗ, ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ನೀಡುವಾಗಲೆಲ್ಲ ಮೈಕ್‌ನಿಂದ ಕರ್ಕಶ ಧ್ವನಿ ಹೊರ ಬರುತ್ತಿದ್ದುದರಿಂದ ಗೊಂದಲ ಮೂಡಿಸಿತು.
    ಬಹಿಷ್ಕಾರ ಶಿಕ್ಷೆಗೆ ಬೇಕು ಮುಕ್ತಿ: ತಾತನ ಕಾಲದಿಂದಲೂ ಅಂದರೆ 60 ವರ್ಷಗಳಿಂದ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ವಾಸಿಸುತ್ತಿರುವ ಮನೆ ಎದುರಿನಲ್ಲೇ ತೇರಿನ ಮನೆ ನಿರ್ಮಿಸಲಾಗಿದೆ. ಇದರಿಂದ ಮನೆಗೆ ಗಾಳಿ, ಬೆಳಕು ಇಲ್ಲದಂತಾಗಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ತೇರಿನ ಮನೆ ತೆರವುಗೊಳಿಸಲು ಉಪವಿಭಾಗಾಧಿಕಾರಿ ಆದೇಶಿಸಿದರೂ ಕ್ರಮ ಕೈಗೊಂಡಿಲ್ಲ. ತೇರಿನ ಮನೆ ತೆರವುಗೊಳಿಸುವುದು ಮಾತ್ರವಲ್ಲ, ಬಹಿಷ್ಕಾರ ಶಿಕ್ಷೆಯಿಂದ ಮುಕ್ತಿಕೊಡಿಸಬೇಕು ಎಂದು ಲಿಂಗದಹಳ್ಳಿ ಗ್ರಾಮದ ಶ್ರುತಿ, ಕೆ.ಜೆ.ಜಾರ್ಜ್ ಬಳಿ ಗದ್ಗದಿತರಾಗಿ ಮನವಿ ಮಾಡಿದರು. ಎಸಿ ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಸಂತ್ರಸ್ತೆಯ ಮನೆಗೆ ಹೊಂದಿಕೊಂಡಂತೆ ತೇರು ಮನೆ ನಿರ್ಮಿಸಿರುವುದು ನಿಜ. ಅದರಿಂದ ಗಾಳಿ, ಬೆಳಕು ಬೀಳುತ್ತಿಲ್ಲ. ಸ್ಥಳ ಪರಿಶೀಲಿಸಿ ತೆರವಿಗೆ ಆದೇಶಿರುವುದು ಅಷ್ಟೇ ಅಲ್ಲ, ದೇಗುಲ ಸಮಿತಿ ಜತೆ ಸಭೆ ನಡೆಸಿದರೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದರು. ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, ತೇರು ಮನೆ ಬೇಕು. ಆದರೆ ಸಂತ್ರಸ್ತ ಯುವತಿ ಮನೆಯ ಮುಂದೆಯೇ ಇರಬೇಕೆಂಬ ಕಾನೂನಿಲ್ಲ. ಪ್ರತ್ಯೇಕ ಜಾಗದಲ್ಲಿ ತೇರು ಮನೆ ನಿರ್ಮಿಸಲು ಸಮಿತಿ ಅವರೊಂದಿಗೆ ಮಾತನಾಡಿ ಎಂದು ಸೂಚಿದರೇ ಹೊರತು, ಕುಟುಂಬ ಎದುರಿಸುತ್ತಿರುವ ಬಹಿಷ್ಕಾರ ಶಿಕ್ಷೆಗೆ ಸಂಬಂಧಿಸಿ ಚಕಾರವೆತ್ತಲಿಲ್ಲ.
    ಶಾಸಕರಾದ ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಟಾರಿಯ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಭದ್ರಾವತಿ ಅರಣ್ಯ ಉಪ ವಿಭಾಗದ ಡಿಸಿಎ್ ಆಶೀಶ್ ರೆಡ್ಡಿ, ಎಸಿ ಡಾ. ಕೆ.ಜೆ.ಕಾಂತರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts