More

    ಪ್ರವಾಸೋದ್ಯಮದ ಮೇಲೆ ಕರೊನಾ ಕರಿನೆರಳು

    ಕಾರವಾರ: ಕರೊನಾ ಲಾಕ್​ಡೌನ್ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಸಂಪೂರ್ಣ ಲಾಕ್ ಮಾಡಿಬಿಟ್ಟಿದೆ.

    ಕೃಷಿ, ಮೀನುಗಾರಿಕೆ ಬಿಟ್ಟರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದಾಯ ತರುವ ಉದ್ಯೋಗ ಎಂದರೆ ಪ್ರವಾಸೋದ್ಯಮ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಸಿಗರ ಸೌಲಭ್ಯಕ್ಕಾಗಿ 100ಕ್ಕೂ ಅಧಿಕ ರೆಸಾರ್ಟ್​ಗಳು,

    ಹೋಂ ಸ್ಟೇ, ಹಾಗೂ ಹೋಟೆಲ್​ಗಳಿವೆ. ಗೋಕರ್ಣ, ಮುರ್ಡೆಶ್ವರ, ದಾಂಡೇಲಿ ಮುಂತಾದ ಊರುಗಳ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಪ್ರವಾಸಿಗರ ಮೇಲೇ ನಿಂತಿವೆ.

    ಪ್ರವಾಸೋದ್ಯಮ ಕ್ಷೇತ್ರದಲ್ಲಿರುವವರಿಗೆ ಬೇಸಿಗೆ ಲಾಭ ತರುವ ದಿನಗಳಾಗಿದ್ದವು. ಮಕ್ಕಳ ಪರೀಕ್ಷೆಗಳು ಮುಗಿದ ಕಾರಣ ಹೊರ ಜಿಲ್ಲೆ, ರಾಜ್ಯಗಳ ಸಾಕಷ್ಟು ಜನರು ಜಿಲ್ಲೆಗೆ ಬಂದು ಇಲ್ಲಿನ ತಾಣಗಳಲ್ಲಿ ವಿಹರಿಸುತ್ತಿದ್ದರು. ಇದರಿಂದ ಪ್ರವಾಸೋದ್ಯಮ ಕಾರ್ಯ ದಲ್ಲಿರುವವರು ಬೇಸಿಗೆಯ ದುಡಿಮೆಗಾಗಿ ಕಾದು ಕುಳಿತಿರುತಿದ್ದರು. ಆದರೆ, ಈ ಬಾರಿ ಆ ದುಡಿಮೆ ಇಲ್ಲವಾಗಿದೆ. ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಅಧಿಕ ಪ್ರವಾಸೋದ್ಯಮ ಆದಾಯ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

    ಹಲವರ ಬದುಕು ಕಷ್ಟ: ಪ್ರವಾಸೋದ್ಯಮದಿಂದ ಹೋಟೆಲ್, ರೆಸಾರ್ಟ್​ಗಳಿಗೆ ಮಾತ್ರವಲ್ಲ. ಬೋಟಿಂಗ್ ನಡೆಸುವವರು, ಸಣ್ಣಪುಟ್ಟ ವ್ಯಾಪಾರಸ್ಥರು ಹೀಗೆ ಸಾಕಷ್ಟು ಜನರಿಗೆ ಉದ್ಯೋಗ, ಗಳಿಕೆಯಾಗುತ್ತಿತ್ತು. ಆ ಎಲ್ಲ ಕುಟುಂಬಗಳು ಇಡೀ ವರ್ಷದ ಜೀವನಕ್ಕೆ ತೊಂದರೆಪಡಬೇಕಿದೆ.

    ಉದ್ಯಮಿಗಳಿಗೆ ಸವಾಲು: ಲಾಕ್​ಡೌನ್ ತೆರೆದರೂ ಇನ್ನೂ ಸಾಕಷ್ಟು ದಿನ ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾಗುವ ಯಾವುದೇ ಲಕ್ಷಣವಿಲ್ಲ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿದ್ದವರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಂದೆಯೂ ಪ್ರವಾಸಿಗರನ್ನು ಸೆಳೆಯುವುದು ಇಲ್ಲಿನ ಉದ್ಯಮಿಗಳಿಗೆ ಸವಾಲಾಗಿದೆ.

    ಸರ್ಕಾರಿ ಆದಾಯಕ್ಕೂ ಖೋತಾ: ಕಾರವಾರದ ಚಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಯಕ್ಕೆ ಮೇ ತಿಂಗಳಲ್ಲಿ ಕನಿಷ್ಠ 1 ಲಕ್ಷ ರೂ. ಆದಾಯ ಬರುತ್ತಿತ್ತು. ರಾಕ್ ಗಾರ್ಡನ್ ಈ ಅವಧಿಯಲ್ಲಿ ಒಂದೇ ದಿನಕ್ಕೆ ಒಂದು ಲಕ್ಷದವರೆಗೂ ಆದಾಯ ಮಾಡಿದ್ದಿದೆ. ಆದರೆ, ಅವುಗಳಿಗೆ ಒಂದು ಪೈಸೆಯೂ ಇಲ್ಲ. ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೈಡ್, ಬೀಚ್ ಗಾರ್ಡ್ ಹಾಗೂ ಇತರ ಸಿಬ್ಬಂದಿಗೆ ಕಳೆದ ಎರಡು ತಿಂಗಳಿಂದ ವೇತನವೂ ಆಗಿಲ್ಲ. ಇನ್ನು ಗೋಕರ್ಣ ಗ್ರಾಮ ಪಂಚಾಯಿತಿ ಪ್ರವಾಸಿಗರ ವಾಹನದಿಂದ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿತ್ತು. ಆ ಆದಾಯಕ್ಕೂ ಕುತ್ತು ಬಂದಿದೆ.

    ಮಳೆಗಾಲದ ನಷ್ಟವನ್ನು ನಾವು ಡಿಸೆಂಬರ್ ಹಾಗೂ ಏಪ್ರಿಲ್- ಮೇ ತಿಂಗಳಲ್ಲಿ ದುಡಿದುಕೊಳ್ಳುತ್ತಿದ್ದೆವು. ಈ ಬಾರಿಯೂ ಮೇ ನಲ್ಲಿ ಉತ್ತಮ ಪ್ರವಾಸಿಗರ ನಿರೀಕ್ಷೆ ಇತ್ತು. ಇನ್ನು ಸದ್ಯ ಪ್ರವಾಸಿಗರು ಬರುವ ಯಾವುದೇ ನಿರೀಕ್ಷೆ ಇಲ್ಲ.
    | ವಿನಯ ನಾಯ್ಕ ರೆಸಾರ್ಟ್ ಮಾಲೀಕ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts