More

    ಪ್ರವಾಸಿ ತಾಣಗಳಲ್ಲಿ ನೀರವ ಮೌನ

    ಚಿಕ್ಕಮಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆ ಆರ್ಭಟ ಜೋರಾಗುತ್ತಿದ್ದಂತೆ ಪ್ರವಾಸಿಗರಲ್ಲಿ ಭೀತಿ ಹೆಚ್ಚಾಗಿ ಪ್ರವಾಸಕ್ಕೆ ಸ್ವಯಂನಿರ್ಬಂಧ ಹಾಕಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಕೆಲ ಪ್ರವಾಸಿ ಸ್ಥಳಗಳು ಭಣಗುಡುತ್ತಿವೆ. ಧಾರ್ವಿುಕ ಕ್ಷೇತ್ರಗಳಲ್ಲೂ ಭಕ್ತರ ಸಂಖ್ಯೆ ಕ್ಷೀಣಿಸಿದೆ. ಕಳೆದ ವರ್ಷದ ಸ್ಥಿತಿ ಮರುಕಳಿಸುತ್ತಿದೆ.

    ಹಬ್ಬ, ವೀಕೆಂಡ್, ಸಾಲು ಸಾಲು ಸರ್ಕಾರಿ ರಜೆಗಳು ಬಂತೆಂದರೆ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಧಾರ್ವಿುಕ ಕೇಂದ್ರಗಳು ಸಾವಿರಾರು ಸಂಖ್ಯೆಯ ಪ್ರವಾಸಿಗರು, ಭಕ್ತರಿಂದ ತುಂಬಿರುತ್ತಿದ್ದವು. ಆದರೆ ಭಾನುವಾರ ಖಾಲಿಯಾಗಿದ್ದವು.

    ನಿತ್ಯ ಜನರಿಂದ ಗಿಜಿಗುಡುತ್ತಿದ್ದ ಚಂದ್ರದ್ರೋಣ ಪರ್ವತಶ್ರೇಣಿ ಸಾಲಿನಲ್ಲಿ ವಾರಾಂತ್ಯ ಬಂತೆಂದರೆ ನೂಕುನುಗ್ಗಲು, ಟ್ರಾಫಿಕ್ ಜಾಮ್ಂದ ಹಲವು ಗಂಟೆ ಕಾಲ ಕಾದುಸೋತು ವಾಹನ ಇಳಿದು ಮಕ್ಕಳನ್ನು ಹೆಗಲೆ ಮೇಲೆ ಹೊತ್ತು ಬೆವರು ಸುರಿಸಿಕೊಂಡು ಸಾಗಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡು ಆನಂದಿಸುತ್ತಿದ್ದ ಸ್ಥಳದಲ್ಲಿ ನೀರವ ಮೌನ ಆವರಿಸಿತ್ತು.

    ಕಳೆದ ವಾರಾಂತ್ಯದ ಎರಡು ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಆಗಮಿಸುತ್ತಿದ್ದವು. ಕಳೆದ ಎರಡು ದಿನಗಳಿಂದ ಬೈಕ್​ಗಳು ಸೇರಿ ಮುಳ್ಳಯ್ಯನಗಿರಿಗೆ ಕೇವಲ 360 ವಾಹನಗಳು ಬಂದಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ, ಅತ್ತಿಗುಂಡಿ, ದತ್ತಪೀಠ, ಮಾಣಿಕ್ಯಧಾರ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಅಬ್ಬೆ ಜಲಪಾತ, ಝುರಿಫಾಲ್ಸ್ ಹಾಗೂ ಪಿಕ್​ನಿಕ್ ಸ್ಪಾಟ್​ಗಳಲ್ಲಿ ಬೆರಳೆಣಿಕೆಯ ಪ್ರವಾಸಿಗರಿದ್ದಾರೆ.

    ಗಿರಿಶ್ರೇಣಿಯ ಬಹುತೇಕ ವೃತ್ತಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಹಾಗೂ ಹೋಮ್ಾರ್ಡ್​ಗಳು ವಿಶ್ರಾಂತಿ ಪಡೆಯುತ್ತಿದ್ದರು. ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಪ್ರವಾಸ ಮೊಟಕುಗೊಳಿಸಿ ಸೋಂಕು ಹರಡದಂತೆ ತಡೆಗಟ್ಟಲು ಸಹಕರಿಸಿ ಎಂದು ಮುಖ್ಯ ವೃತ್ತಗಳಲ್ಲಿದ್ದ ಪೊಲೀಸರು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

    ಬುಕ್ ಮಾಡಿದ್ದ ಟ್ಯಾಕ್ಸಿ ಕ್ಯಾನ್ಸಲ್: ಜಿಲ್ಲೆಯಲ್ಲಿ ಪ್ರವಾಸಕ್ಕೆಂದು ಮೂರು ವಾರಗಳ ಮುಂಚೆಯೇ ಟ್ಯಾಕ್ಸಿಗಳನ್ನು ಬುಕ್ ಮಾಡಿದ್ದ ನೂರಾರು ಮಂದಿ ಕರೊನಾ ಕಾರಣದಿಂದ ರದ್ದು ಮಾಡಿದ್ದಾರೆ. ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದಬ್​ದಬೆ ಫಾಲ್ಸ್, ಮಾಣಿಕ್ಯಧಾರಾಕ್ಕೆ ಸಾಗುವ ಬಾಡಿಗೆ ಜೀಪ್ ಚಾಲಕರಿಗೆ ಬಾಡಿಗೆದಾರರಿಲ್ಲದೆ ಕಾಲಹರಣ ಮಾಡುತ್ತಿದ್ದರು. ನಿತ್ಯ ಬಾಡಿಗೆಯನ್ನೇ ನಂಬಿ ಜೀವನ ಸಾಗಿಸುವ ಚಾಲಕರಿಗೆ ಚಿಂತೆಯಾಗಿದೆ.

    ನಗರದ ರಸ್ತೆಗಳು ಖಾಲಿ: ಹೋಟೆಲ್, ಲಾಡ್ಜ್, ಮದ್ಯದಂಗಡಿ ಸೇರಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಅಂಗಡಿಗಳಿಗೆ ವ್ಯಾಪಾರವಿಲ್ಲದಂತಾಗಿದೆ. ಟ್ರಾಫಿಕ್ ಜಾಮ್ ಆಗಿ ವಾಹನ ಸಂಚಾರ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದ ಪೊಲೀಸರು ಕೊಂಚ ನಿರಾಳರಾಗಿದ್ದರು. ಕೆಎಸ್​ಆರ್​ಟಿಸಿ ನೌಕರರ ಪ್ರತಿಭಟನೆ ಹಾಗೂ ಪ್ರವಾಸಿಗರ ಸಂಖ್ಯೆ ವಿರಳದಿಂದ ನಗರದ ರಸ್ತೆಗಳು ಖಾಲಿ ಖಾಲಿಯಾಗಿ ಸಂಚಾರ ಸುಗಮವಾಗಿತ್ತು.

    ಹೋಮ್ ಸ್ಟೇಗಳಿಗೂ ಪೆಟ್ಟು: ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಹೋಮ್ ಸ್ಟೇ ಹಾಗೂ ಹತ್ತಾರು ರೆಸಾರ್ಟ್​ಗಳಿದ್ದು ಶೇ.90 ರಷ್ಟು ಖಾಲಿ ಇವೆ. ಕಳೆದ ವಾರಾಂತ್ಯಗಳಲ್ಲಿ ರೂಂ ಇಲ್ಲದೆ ಹಿಂತಿರುಗಿದ್ದ 200ಕ್ಕೂ ಹೆಚ್ಚು ಪ್ರವಾಸಿಗರು ಮುಂದಿನ ವಾರ ಬರುವುದಾಗಿ ಮುಂಗಡ ಹಣ ನೀಡಿ ಬುಕ್ ಮಾಡಿದ್ದರು. ಅವರೆಲ್ಲ ಕರೊನಾತಂಕದಿಂದ ರದ್ದು ಮಾಡಿ ಹಣ ಹಿಂಪಡೆದಿದ್ದಾರೆ. ಮತ್ತೆ ಕೆಲವು ಹೋಮ್ ಸ್ಟೇ ಮಾಲೀಕರು ಮುನ್ನೆಚ್ಚರಿಕೆಯಿಂದ ಬೆಂಗಳೂರು ಇನ್ನಿತರ ಪ್ರವಾಸಿಗರಿಗೆ ಕೊಠಡಿ ಕಾಯ್ದಿರಿಸುವುದನ್ನು ನಿರಾಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts