More

    ಪ್ರತಿ ಮತಕ್ಕೂ ಗೌರವ ನೀಡಬೇಕು, ಸಚಿವ ಎಂಟಿಬಿ ನಾಗರಾಜ್ ಸಲಹೆ, ದೊಡ್ಡಬಳ್ಳಾಪುರ ಬಿಜೆಪಿ ಮುಖಂಡರೊಂದಿಗೆ ಸಭೆ

    ಬೆಂಗಳೂರು ಗ್ರಾಮಾಂತರ: ಸ್ವಚ್ಛ ಆಡಳಿತ, ಪ್ರಾಮಾಣಿಕ ಸೇವೆಯ ನಿರೀಕ್ಷೆಯಲ್ಲಿ ಮತದಾರರು ಬಿಜೆಪಿ ಹರಸಿದ್ದಾರೆ, ಮತದಾರರ ನಿರೀಕ್ಷೆಯಂತೆ ಜನಸೇವೆ ಮಾಡುವ ಮೂಲಕ ಪ್ರತಿ ಮತಕ್ಕೂ ಗೌರವ ಸಲ್ಲಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸಲಹೆ ನೀಡಿದರು.

    ಗರುಡಾಚಾರ್‌ಪಾಳ್ಯ ವಾರ್ಡ್‌ನ ಸಚಿವರ ಗೃಹಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೊಡ್ಡಬಳ್ಳಾಪುರ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮತದಾರರು 5 ವರ್ಷದ ಅವಧಿಗೆ ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದು ದಿನವನ್ನೂ ಕಾಲಹರಣ ಮಾಡದೆ ಜನಸೇವೆಗೆ ಜೀವನವನ್ನು ಮುಡಿಪಾಗಿಡಬೇಕು ಎಂದು ಹೇಳಿದರು.

    ಮೊದಲ ಬಾರಿಗೆ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಜನಪರ ಆಡಳಿತ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಪರಿಶ್ರಮದ ಲವಾಗಿ ಮತದಾರರು ಬಿಜೆಪಿಯನ್ನು ಹರಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾಯಿತರಾದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಪಕ್ಷಕ್ಕೆ ಕೀರ್ತಿ ತರಬೇಕು ಜತೆಗೆ ಜನರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಬಂಡಾಯ ಅಭ್ಯರ್ಥಿ ಸೇರ್ಪಡೆ: ದೊಡ್ಡಬಳ್ಳಾಪುರ ನಗರಸಭೆಯ 20ನೇ ವಾರ್ಡ್‌ನ ವಿಜೇತ (ಬಿಜೆಪಿ ಬಂಡಾಯ) ಅಭ್ಯರ್ಥಿ ಸುರೇಶ್ ಹಾಗೂ ಬೆಂಬಲಿಗರು ಬುಧವಾರ ಸಚಿವ ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

    ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕೆಲವೊಂದು ಗೊಂದಲದ ಪರಿಣಾಮವಾಗಿ ಸುರೇಶ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ವಾರ್ಡ್‌ನ ಮತದಾರರು ಸುರೇಶ್ ಅವರನ್ನು ಆಶೀರ್ವದಿಸಿದ್ದಾರೆ. ಸುರೇಶ್ ಅವರು ಬಿಜೆಪಿಯವರೇ ಆಗಿರುವುದರಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮರಳಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದ ಎಂಟಿಬಿ ನಾಗರಾಜ್ ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

    ಎಂಟಿಬಿ ಸಾರಥ್ಯದಿಂದ ಗೆಲವು: ನಗರಸಭೆ ಚುನಾವಣೆ ವೇಳೆ ಸಚಿವರು ಎಲ್ಲ ವಾರ್ಡ್‌ಗಳಲ್ಲೂ ಕಾಲ್ನಡಿಗೆ ಮೂಲಕವೇ ಮತಪ್ರಚಾರ ನಡೆಸಿದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಹಾದಿ ಸುಗಮವಾಯಿತು ಎಂದು ನಗರಸಭೆ ಸದಸ್ಯ ಸುರೇಶ್ ಹೇಳಿದರು.

    ಎಂಟಿಬಿ ನಾಗರಾಜ್ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ, ಮುಂದಿನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts