More

    ಪೊಲೀಸ್ ಅಧಿಕಾರಿ ಈಗ ಸಚಿವ

    ಹಾವೇರಿ: ಬಾಲ್ಯದಿಂದಲೂ ನಟನೆಯ ಗೀಳು ಅಂಟಿಸಿಕೊಂಡಿದ್ದ ಬಿ.ಸಿ. ಪಾಟೀಲ, ಪೊಲೀಸ್ ಅಧಿಕಾರಿಯಾಗಿ ಸೇವೆಗೆ ಸೇರಿ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು. ನಂತರ ಪೊಲೀಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯ ರಂಗ ಪ್ರವೇಶಿಸಿ, ಈಗ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯಿಂದ 2003ರಲ್ಲಿ ಹಿರೇಕೆರೂರಿಗೆ ಬಂದು ಇಲ್ಲಿನ ರೈತರ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ನಂತರ 2004ರಲ್ಲಿ ಜೆಡಿಎಸ್ ಟಿಕೆಟ್ ಪಡೆದು ಹಿರೇಕೆರೂರ ಕ್ಷೇತ್ರದಿಂದ ಸ್ಪರ್ಧಿಸಿ ಸಿನಿಮಾದ ಜೊತೆಗೆ ರಾಜಕೀಯ ಇನ್ಸಿಂಗ್ ಆರಂಭಿಸಿದರು. 17 ವರ್ಷದ ಅವಧಿಯಲ್ಲಿ ಹಿರೇಕೆರೂರ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಅವರ ಆಶೀರ್ವಾದದ ಬಲದಿಂದ 5 ಚುನಾವಣೆ ಎದುರಿಸಿ ನಾಲ್ಕು ಬಾರಿ ಗೆಲುವು ಕಂಡರು.

    ಕಳೆದ ಮೂರು ದಶಕಗಳಿಂದ ಹಿರೇಕೆರೂರ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರು ಆಯ್ಕೆಯಾಗಿರಲಿಲ್ಲ. ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನವೂ ಸಿಗುವುದಿಲ್ಲ ಎಂಬ ಮಾತಿತ್ತು. ಅದನ್ನು ಬಿ.ಸಿ. ಪಾಟೀಲ ಅಳಿಸಿಹಾಕಿ, ಬಿ.ಜಿ. ಬಣಕಾರ ನಂತರ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದು ಕ್ಷೇತ್ರದ ಜನತೆಗೆ ಸಂತಸ ತಂದಿದೆ.

    ಬಿಸಿಪಿ ರಾಜಕೀಯ ಹಾದಿ…

    2004ರಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಬಿ.ಸಿ. ಪಾಟೀಲ, ಪ್ರಬಲ ಎದುರಾಳಿಯಾಗಿದ್ದ ಬಿಜೆಪಿಯ ಯು.ಬಿ. ಬಣಕಾರ ಅವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2008ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಯು.ಬಿ. ಬಣಕಾರ ವಿರುದ್ಧ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಯು.ಬಿ. ಬಣಕಾರ ವಿರುದ್ಧ ಸೋಲುಕಂಡರು. 2018ರಲ್ಲಿ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಅರ್ಹತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವಂತೆ ವಿನಂತಿಸಿದರೂ ಅಲ್ಲಿ ಮಾನ್ಯತೆ ಸಿಗಲಿಲ್ಲ. ಇದರಿಂದ ಬಿ.ಸಿ. ಪಾಟೀಲ ಆಕ್ರೋಶಗೊಂಡಿದ್ದರು. 2019ರ ಲೋಕಸಭೆ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಸಭೆ ನಡೆಸಿ ಪಕ್ಷದಲ್ಲಿ ತಮಗೆ ಆಗಿರುವ ಅನ್ಯಾಯ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದೇನು ನಿರ್ಣಯ ಕೈಗೊಳ್ಳಬೇಕು ಎಂದು ರ್ಚಚಿಸಿದ್ದರು. ಅಭಿಮಾನಿಗಳು, ಕಾರ್ಯಕರ್ತರ ಅಭಿಪ್ರಾಯದಂತೆ 2019ರ ಜುಲೈ 5ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಸೇರ್ಪಡೆಗೊಂಡು ಡಿಸೆಂಬರ್​ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನ ಬಿ.ಎಚ್. ಬನ್ನಿಕೋಡರನ್ನು ಅತಿಹೆಚ್ಚು ಮತಗಳ ಅಂತರದಿಂದ ಸೋಲಿಸಿ ನಾಲ್ಕನೇ ಬಾರಿಗೆ ಶಾಸಕರಾಗಿ, ಇದೀಗ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಹಿರೇಕೆರೂರ ಕ್ಷೇತ್ರದಲ್ಲಿ ಸಂಭ್ರಮಾಚರಣೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ಬಿ.ಸಿ. ಪಾಟೀಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹಿರೇಕೆರೂರ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಿಹಿಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. 3ದಶಕಗಳ ಬಳಿಕ ಕ್ಷೇತ್ರದ ಶಾಸಕರು ಸಚಿವರಾಗಿರುವುದಕ್ಕೆ ಕುಣಿದು ಕುಪ್ಪಳಿಸಿದರು.

    ಸಚಿವ ಸ್ಥಾನ ದೊರೆತಿರುವುದು ಕ್ಷೇತ್ರದ ಜನತೆ ಹಾಗೂ ನನಗೆ ಖುಷಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಕ್ಷದ ಮುಖಂಡರು, ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. – ಬಿ.ಸಿ. ಪಾಟೀಲ, ನೂತನ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts