More

    ಪೈಪ್ ಕಾಂಪೋಸ್ಟ್ ಯೋಜನೆ ವಿಫಲ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಘನ- ದ್ರವ ತ್ಯಾಜ್ಯಗಳಿಂದ ಪರಿಸರದ ಮೇಲಾಗುವ ಪರಿಣಾಮ ತಡೆಯುವ ಉದ್ದೇಶದಿಂದ ಮನೆಯಲ್ಲೇ ತ್ಯಾಜ್ಯವನ್ನು ಜೈವಿಕ ಗೊಬ್ಬರವಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪೈಪ್ ಕಾಂಪೋಸ್ಟ್ ಯೋಜನೆ ತರಬೇತಿ ಕೊರತೆಯಿಂದ ಪುತ್ತೂರಿನಲ್ಲಿ ನನೆಗುದಿಗೆ ಬಿದ್ದಿದೆ.
    ಎಲ್ಲೆಲ್ಲೂ ಸ್ವಚ್ಛತೆ ಕಾಪಾಡಬೇಕು ಎಂಬ ಏಕೈಕ ಉದ್ದೇಶದಿಂದ ಪ್ರತಿಯೊಂದು ಗ್ರಾಪಂಗಳಲ್ಲೂ ಜೈವಿಕ ಕಾಂಪೋಸ್ಟ್ ಉತ್ಪಾದನೆ ಉದ್ದೇಶದಿಂದ ಗ್ರಾಮದ ಪ್ರತೀ ಮನೆಗೂ ಪೈಪ್ ವಿತರಣೆ ಯೋಜನೆ ಪುತ್ತೂರಿನಲ್ಲಿ ನಡೆದಿದೆ. 3 ವರ್ಷದ ಹಿಂದೆ 44 ಗ್ರಾಪಂಗಳಿಗೆ ಒಟ್ಟು 5000 ಕಾಂಪೋಸ್ಟ್ ಪೈಪ್ ವಿತರಣೆಯಾಗಿದೆ. ಪ್ರತಿ ಗ್ರಾಮದ ಪಿಡಿಒ, ಗ್ರಾಮಕರಣಿಕರಿಗೆ ಈ ಬಗ್ಗೆ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಮ ಪಂಚಾಯಿತಿ ಸದ್ಯರಿಗೂ ಪೈಪ್ ಕಾಂಪೋಸ್ಟ್ ಯೋಜನೆ ಬಗ್ಗೆ ತರಬೇತಿ ಸಹಿತ ಮಾಹಿತಿ ನೀಡಲಾಗಿತ್ತು. ಆದರೆ ಕಾಂಪೋಸ್ಟ್ ಮಾಡಲು ಗ್ರಾಪಂ ಕಚೇರಿಯಿಂದ ಕೊಂಡುಹೋದ ಪೈಪ್ ಗೊಬ್ಬರ ತಯಾರಿಕೆಗೆ ಬಳಕೆಯಾಗಿಲ್ಲ.

    ಏನಿದು ಯೋಜನೆ: ಪ್ಲಾಸ್ಟಿಕ್ ಹೊರತುಪಡಿಸಿ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮನೆಯ ಸುತ್ತ ಎಸೆಯದೆ ಅದನ್ನು ಗ್ರಾಪಂಗಳು ನೀಡಿದ ಪೈಪ್‌ನೊಳಗೆ ಹಾಕಬೇಕು. ಪೈಪ್‌ನೊಳಗೆ ಹಾಕಿ ಅದಕ್ಕೆ ಎರೆಹುಳವನ್ನು ಬಿಟ್ಟಲ್ಲಿ ಅದು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಒಂದು ಪೈಪ್ ಮನೆಯಲ್ಲಿದ್ದರೆ 4 ರಿಂದ 5 ತಿಂಗಳು ಅದರಲ್ಲಿ ವೇಸ್ಟೇಜನ್ನು ಹಾಕಬಹುದು. 7ರಿಂದ 8 ತಿಂಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಗೊಬ್ಬರವನ್ನು ಕೃಷಿಗೆ ಬಳಕೆ ಅಥವಾ ಗ್ರಾಪಂ ಮೂಲಕ ಸಾವಾಯುವ ಗೊಬ್ಬರ ಉತ್ಪಾದನಾ ಸಂಸ್ಥೆಗಳಿಗೆ ಮಾರಬಹುದು.

    5 ಲಕ್ಷ ರೂ. ಮೊತ್ತದ ಪೈಪ್ ವಿತರಣೆ: ಪುತ್ತೂರು ತಾಲೂಕಿನಲ್ಲಿ 44 ಗ್ರಾಪಂಗಳಿಗೆ ಸುಮಾರು 5000 ಪೈಪ್ ವಿತರಿಸಲಾಗಿದೆ. ಒಂದು ಪೈಪ್‌ಗೆ 100 ರೂ. ನಂತೆ ಒಟ್ಟು 5 ಲಕ್ಷ ರೂ. ಮೊತ್ತದ ಪೈಪ್ ವಿತರಣೆಯಾಗಿದೆ. ಪ್ರತಿ ಗ್ರಾಪಂಗಳಿಗೂ ಸರ್ಕಾರ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ದೊಡ್ಡ ಗ್ರಾಪಂಗಳಿಗೆ ನಾಲ್ಕು ಮತ್ತು ಸಣ್ಣ ಗ್ರಾಮಗಳಿಗೆ 2 ಲಕ್ಷ ರೂ. ಅನುದಾನ ನೀಡಿದೆ. ಈ ಅನುದಾನವನ್ನು ಗ್ರಾಮದ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕವಾಗಿ ಬಳಕೆ ಮಾಡಬೇಕು ಎಂಬ ಆದೇಶವೂ ಇತ್ತು. ಹೆಚ್ಚಿನ ಗ್ರಾಪಂಗಳು ಪೈಪ್ ಕಾಂಪೋಸ್ಟಿಂಗ್ ವ್ಯವಸ್ಥೆಗೆ ಒತ್ತು ನೀಡಿ ಗ್ರಾಮದ ಎಲ್ಲ ಮನೆಯಲ್ಲಿಯೂ ಸ್ವಚ್ಚತೆ ಕಾಪಾಡುವ ಉದ್ದೇಶಕ್ಕೆ ಬಳಕೆ ಈ ಅನುದಾನ ಮೀಸಲಾಗಿರಿಸಿದೆ. ಕೆಲವೊಂದು ಪಂಚಾಯಿತಿಗಳಲ್ಲಿ ಸಾರ್ವಜನಿಕ ಶೌಚಗೃಹ ಮತ್ತು ಗ್ರಾಮಸ್ಥರಿಗೆ ಶೌಚಗೃಹ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡಿದೆ. ಈ ಪೈಕಿ ಪೈಪ್ ಕಾಂಪೋಸ್ಟಿಂಗ್‌ಗೆ ಬಳಕೆ ಮಾಡಿರುವ ಅನುದಾನ ಎಲ್ಲವೂ ವ್ಯರ್ಥವಾಗಿದೆ.
    ವಿಫಲ: ಪೈಪ್ ಕಾಂಪೋಸ್ಟ್ ಯೋಜನೆ ಮೂಲಕ ಅಧಿಕಾರಿಗಳಿಗೆ ತರಬೇತಿ ನೀಡಿದರೂ ಸಾರ್ವಜನಿಕರಿಗೆ ತರಬೇತಿ ನೀಡಿಲ್ಲ. ಎರೆಹುಳ ಸಿಗದೇ ಇದ್ದಲ್ಲಿ ಬೆಲ್ಲದ ಜತೆ ಸೆಗಣಿ ಮಿಶ್ರಣ ಮಾಡಿ ಪೈಪ್‌ನೊಳಗೆ ಹಾಕಿ ತನ್ನಿಂತಾನೆ ಎರೆಹುಳ ಉತ್ಪತ್ತಿಯಾಗುತ್ತದೆ ಎಂಬುದನ್ನೂ ಗ್ರಾಮಸ್ಥರಿಗೆ ತಿಳಿಸಲಾಗಿತ್ತು. ಅದರೆ ಗ್ರಾಮದ ಜನರು ಮಾತ್ರ ಪೈಪನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ ಎಂಬುದು ಅಧಿಕಾರಿಗಳ ಆರೋಪ.

    4-5 ವರ್ಷದ ಹಿಂದೆ ಜಾರಿಯಾದ ಪೈಪ್ ಕಾಂಪೋಸ್ಟ್ ಯೋಜನೆ ಪರಿಸರಸ್ನೇಹಿ ಯೋಜನೆ. ಆದರೆ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ, ತರಬೇತಿ ಕೊರತೆಯಿಂದ ಯೋಜನೆ ವಿಫಲವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts