More

    ಪುರಸಭೆ ಅಧ್ಯಕ್ಷ ಸ್ಥಾನ ಡೋಲಾಯಮಾನ

    ಶಿಗ್ಗಾಂವಿ(ಗ್ರಾ): ಪಟ್ಟಣದ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅಧಿಕಾರಾವಧಿ ಆಗಸ್ಟ್​ಗೆ 10 ತಿಂಗಳು ಪೂರೈಸುತ್ತದೆ. ಒಳ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೋ ಅಥವಾ ತಾವೇ ಮುಂದುವರಿಯುತ್ತಾರೋ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

    ಒಳಒಪ್ಪಂದಂತೆ ಹಾಲಿ ಅಧ್ಯಕ್ಷರಿಂದ ರಾಜೀನಾಮೆ ಕೊಡಿಸಿ, ಹುದ್ದೆಗೇರಲು ಕೆಲ ಸದಸ್ಯರು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 9, ಕಾಂಗ್ರೆಸ್ 6, ಪಕ್ಷೇತರ 8 ಸದಸ್ಯರಿದ್ದಾರೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಪುರಸಭೆ ಅತಂತ್ರವಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಂದು ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷೇತರ ಸದಸ್ಯರನ್ನು ಸೆಳೆದು ಬಿಜೆಪಿಯ ಶ್ರೀಕಾಂತ ಬುಳ್ಳಕ್ಕನವರ ಅವರನ್ನು ಅಧ್ಯಕ್ಷರನ್ನಾಗಿಸಿದ್ದರು. ತನ್ಮೂಲಕ ಶಿಗ್ಗಾಂವಿ ಪುರಸಭೆಯಲ್ಲಿ ಕಮಲ ಅರಳುವಂತೆ ಮಾಡಿದ್ದರು. 30 ತಿಂಗಳು ಅವಧಿಯನ್ನು ತಲಾ 10 ತಿಂಗಳಿನಂತೆ ಮೂವರಿಗೆ ಅಧಿಕಾರ ನೀಡುವ ಮಾತುಕತೆ ನಡೆದಿತ್ತು. ಶ್ರೀಕಾಂತ ಬುಳ್ಳಕ್ಕನವರ ಅವರಿಗೆ 10 ತಿಂಗಳ ಅವಧಿ ನಿಗದಿಪಡಿಸಿ, ಒಂದು ತಿಂಗಳ ಮುಂಚಿತವಾಗಿ ರಾಜೀನಾಮೆ ನೀಡಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸುವ ಕುರಿತು ಒಪ್ಪಂದವಾಗಿದೆ. ಅದರಂತೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ 9 ತಿಂಗಳು ಅಧ್ಯಕ್ಷ ಸ್ಥಾನ ಅನುಭವಿಸಿದ್ದರೂ, ಇನ್ನೂ ರಾಜೀನಾಮೆ ನೀಡದಿರುವುದು ಕುತೂಹಲ ಮೂಡಿಸಿದೆ.

    ಒಂದು ವೇಳೆ ಶ್ರೀಕಾಂತ ಬುಳ್ಳಕ್ಕನವರ ರಾಜೀನಾಮೆ ನೀಡಿದರೆ, ಪಕ್ಷೇತರರಾಗಿ ಗೆದ್ದು ಬಿಜೆಪಿ ಬೆಂಬಲಿಸಿರುವ ರಮೇಶ ವನಹಳ್ಳಿ, ಬಿಜೆಪಿ ಸದಸ್ಯರಾದ ದಯಾನಂದ ಅಕ್ಕಿ ಹಾಗೂ ಸಿದ್ದಾರ್ಥಗೌಡ ಪಾಟೀಲ ಅವರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಬೇಕು ಎಂದು ವರಿಷ್ಠರು ತೀರ್ವನಿಸಿದರೆ, ಎರಡನೇ ಬಾರಿಗೆ ಸದಸ್ಯರಾಗಿರುವ ರೂಪಾ ಬನ್ನಿಕೊಪ್ಪ ಅವರಿಗೆ ಅವಕಾಶ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಾವುದಕ್ಕೂ ಇಷ್ಟರಲ್ಲಿಯೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

    ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಹಂಚಿಕೆ ವಿಷಯದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುತ್ತದೆ. ಮೊದಲ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದದ ಮಾತುಕತೆ ನಡೆದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

    | ಶಿವಾನಂದ ಮ್ಯಾಗೇರಿ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts