More

    ಪಾಲಿಕೆಯ ಹಳೇ ಕಟ್ಟಡಕ್ಕೆ ದುರ್ಗತಿ

    ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಬೆಳಗಾವಿ ಮಹಾನಗರದ ಆಡಳಿತದ ಗತವೈಭವದ ಇತಿಹಾಸದ ಜತೆಗೆ ಕನ್ನಡ ಮತ್ತು ಮರಾಠಿ ಭಾಷಾ ಹೋರಾಟದ ಆ ದಿನಗಳನ್ನು ನೆನಪಿಸುವ ಕಾರ್ಪೋರೇಷನ್ ಓಲ್ಡ್ ಬಿಲ್ಡಿಂಗ್’ ಇದೀಗ ನಿರ್ವಹಣೆ ಇಲ್ಲದೆ ಅಧೋಗತಿಗೆ ತಲುಪಿದೆ.

    ಮಹಾನಗರದಲ್ಲಿ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದಾಗಿರುವ ಪಾಲಿಕೆಯ ಆಡಳಿತ ಕಚೇರಿಯ ಹಳೆಯ ಕಟ್ಟಡವು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿತ್ತು. ಬಳಿಕ 1942ರಲ್ಲಿ ಈ ಕಟ್ಟಡದಲ್ಲಿ ನಗರಸಭೆ ಆಡಳಿತ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಿತ್ತು. ತದನಂತರ ದಿನಗಳಲ್ಲಿ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ 2008ರಲ್ಲಿ ಆಡಳಿತ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈ ಕಟ್ಟಡದಲ್ಲಿ 2010ರಿಂದ ಬೆಳಗಾವಿ ತಾಲೂಕು ತಹಸೀಲ್ದಾರ್ ಕಚೇರಿಯು ಕಾರ್ಯನಿರ್ವಹಿಸುತ್ತಿದೆ.

    ಮೂಲತಃ ಇದು ಮಹಾನಗರ ಪಾಲಿಕೆಯ ಸ್ವಂತ ಕಟ್ಟಡವಾಗಿರುವುದರಿಂದ 1942 ರಿಂದ 2020ರ ಅವಧಿಯಲ್ಲಿ ಪಾಲಿಕೆಯ ಎಲ್ಲ ದಾಖಲೆಗಳನ್ನು ಕಟ್ಟಡದ ಸಭಾಂಗಣದಲ್ಲಿ ಇಡಲಾಗಿದೆ. ಇನ್ನುಳಿದ ಕೊಠಡಿಗಳಲ್ಲಿ ಬೆಳಗಾವಿ ತಾಲೂಕು ತಹಸೀಲ್ದಾರ್ ಕಚೇರಿಗಳು ಕಾರ್ಯಾನಿರ್ವಹಿಸುತ್ತಿವೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಮತ್ತು ಸ್ವಚ್ಛತೆ ಇಲ್ಲದ ಕಾರಣ ಕಟ್ಟಡವು ಕಸದ ತೊಟ್ಟಿಯಾಗಿ ರೂಪುಗೊಂಡಿದೆ. ಕಟ್ಟಡದ ಸುತ್ತಮುತ್ತಲಿನ ಒಳ ಮತ್ತು ಹೊರ ಆವರಣದಲ್ಲಿ ಮೂತ್ರ ವಿಸರ್ಜನೆಯಿಂದ ಗಬ್ಬೆದ್ದು ನಾರುತ್ತಿದೆ.

    ಸುಮಾರು 80 ವರ್ಷ ಪೂರೈಸಿರುವ ಪಾಲಿಕೆಯ ಹಳೆಯ ಕಟ್ಟಡಕ್ಕೆ ದಶಕಗಳಿಂದ ಸುಣ್ಣ, ಬಣ್ಣ ಹಚ್ಚಿಲ್ಲ. ಕಟ್ಟಡದಲ್ಲಿ ಸಂಗ್ರಹಿಸಿಟ್ಟಿರುವ ಮಹತ್ವದ ದಾಖಲೆಗಳಿಗೆ ಸಂರಕ್ಷಣೆ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಕಟ್ಟಡವು ಸೋರುತ್ತಿರುವುದರಿಂದ ಅಲ್ಲಿನ ದಾಖಲೆಗಳೆಲ್ಲವೂ ಕೊಳೆತು ನಾರುತ್ತಿವೆ. ಕಟ್ಟಡದ ಒಳಗೆ ಪ್ರವೇಶಿಸಿದ ಸರ್ಕಾರಿ ಕಚೇರಿ ಎಂಬ ವಾತಾವರಣವೇ ಇಲ್ಲದಂತಾಗಿದೆ. ಹಗಲು ಹೊತ್ತು ವಿದ್ಯುತ್ ಹೋದರೆ ಕಟ್ಟಡದ ಒಳಗೆ ಪ್ರವೇಶಿಸಲು ಭಯವಾಗುವ ಪರಿಸ್ಥಿತಿ ಇದೆ. ಮಹಾನಗರ ಪಾಲಿಕೆ ಮತ್ತು ತಾಲೂಕು ತಹಸೀಲ್ದಾರ್ ಕಚೇರಿ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಕಟ್ಟಡವೇ ಸಂಪೂರ್ಣ ಹಾಳಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts