More

    ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಡಿ

    ಶಿಗ್ಗಾಂವಿ: ಪರಿಶಿಷ್ಟ ಜಾತಿ ಪಟ್ಟಿಯಿಂದ ಲಮಾಣಿ, ಕೊರಮ, ಭೋವಿ, ಕೊರಚ ಜಾತಿಯವರನ್ನು ಕೈ ಬಿಡಬಾರದು ಎಂದು ಒತ್ತಾಯಿಸಿ ತಾಲೂಕು ಬಂಜಾರ ಸಮಾಜದ ನೇತೃತ್ವದಲ್ಲಿ ಗುರುವಾರ ಪತ್ರ ಚಳವಳಿ ನಡೆಸಲಾಯಿತು.

    ಬಂಜಾರ ಸಮಾಜದ ಯುವ ಮುಖಂಡ ಸುಧೀರ ಲಮಾಣಿ ಮಾತನಾಡಿ, ಲಮಾಣಿ ಸಮಾಜವನ್ನು ಪರಿಶಿಷ್ಟ ಜಾತಿ (ಎಸ್​ಸಿ) ಪಟ್ಟಿಯಿಂದ ಕೈ ಬಿಡುವಂತೆ ಕೆಲವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಈ ವಿಚಾರ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಪರಿಶಿಷ್ಟ ಜಾತಿ ಆಯೋಗಕ್ಕೆ ರವಾನೆ ಮಾಡಿತ್ತು. ನಂತರ ಕೇಂದ್ರ ಎಸ್​ಸಿ ಆಯೋಗ ಇದೇ ಅರ್ಜಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಲಮಾಣಿ, ಭೋವಿ, ಕೊರಚ, ಕೊರಮ ಸಮಾಜದವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬಾರದು ಎಂದು ಒತ್ತಾಯಿಸಿದರು.

    ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ದಾವಲಪ್ಪ ರಾಠೋಡ್ ಮಾತನಾಡಿ, ಈ ನಾಲ್ಕು ಸಮಾಜದವರು ಕಡು ಬಡವರಾಗಿದ್ದು, ಹೊಟ್ಟೆ ಪಾಡಿಗಾಗಿ, ಕಟ್ಟಿಗೆ ಹೊತ್ತು ಮಾರಾಟ, ಕೆಲವರು ಕಲ್ಲು ಒಡೆಯುವ ಕೆಲಸ ಇನ್ನೂ ಕೆಲವರು ಸರಿಯಾದ ನೆಲೆ ಸಿಗದೇ ಗುಳೆ ಹೋಗಿ ಬದುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಯಾರ ಒತ್ತಡಕ್ಕೂ ಮಣಿಯದೇ ಈಗಿರುವ ಮೀಸಲಾತಿಯನ್ನೇ ಮುಂದುವರಿಸಬೇಕು. ಒಂದು ವೇಳೆ ಕೈ ಬಿಟ್ಟರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಬಳಿಕ ಪಟ್ಟಣದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೂರಾರು ಪತ್ರಗಳನ್ನು ರವಾನಿಸಲಾಯಿತು.

    ಎಪಿಎಂಸಿ ಸದಸ್ಯ ಹರ್ಜಪ್ಪ ಲಮಾಣಿ, ಶೀನಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಸುರೇಶ ಲಮಾಣಿ, ಶಂಕರ ಲಮಾಣಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts