More

    ಕನ್ನಡ ಭಾಷೆಗೆ ಧಕ್ಕೆಯಾದರೆ ಎಲ್ಲರೂ ಹೋರಾಡೋಣ; ರುದ್ರಪ್ಪ ಲಮಾಣಿ

    ರಾಣೆಬೆನ್ನೂರ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಿಲ್ಲೆಯ ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಕನ್ನಡ ಭಾಷೆಗೆ ಸ್ವಲ್ಪವಾದರೂ ಧಕ್ಕೆಯಾದರೆ ನಾವೆಲ್ಲರೂ ಒಂದಾಗಿ ಕನ್ನಡ ಉಳಿವಿಗಾಗಿ ಹೋರಾಡೋಣ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
    ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ-ಹೆಳವನಕಟ್ಟಿ ಗಿರಿಯಮ್ಮ-ಹಾನಗಲ್ಲ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಈಗಾಗಲೇ ಗಡಿ ಭಾಗದಲ್ಲಿ ಭಾಷೆಯ ಉಳಿವಿಗಾಗಿ ಬೆಳಗಾವಿಯಲ್ಲಿ ವಿಕಾಸ ಸೌಧ ನಿರ್ಮಿಸಿ ಅಧಿವೇಶನ ಕೂಡ ನಡೆಸಲಾಗುತ್ತಿದೆ. ಕನ್ನಡ, ನಾಡು-ನುಡಿ ಎಂದು ಬಂದಾಗ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಹೋರಾಡುವ ಮನೋಭಾವ ಎಲ್ಲರಲ್ಲೂ ಬರಬೇಕು. ಮುಂದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ ಒಂದೇ ಊರಿಗೆ ಸೀಮಿತವಾಗದೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಂದೊಂದು ಬಾರಿ ನಡೆಯುವಂತಾಗಬೇಕು. ಹೀಗಾಗಿ ಮುಂದಿನ ಜಿಲ್ಲಾ ಸಮ್ಮೇಳನದ ಸ್ಥಳವನ್ನು ಇಂದೇ ಘೋಷಣೆ ಮಾಡಬೇಕು ಎಂದರು.
    ಸಮ್ಮೇಳನ ಉದ್ಘಾಟಿಸಿದ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು, ಸಂದರ್ಭಗಳು ನಿಜವಾದ ಸಾಹಿತ್ಯವನ್ನು ಸೃಷ್ಟಿಸುತ್ತವೆ. ಅಂತಹ ಸಾಹಿತ್ಯದ ಬದುಕಿನಲ್ಲಿ ಜೀವಿಸುತ್ತಿರುವವರು ನಾವಾಗಿದ್ದೆವೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರ ಸಮಾಧಿ ಪಾಳು ಬಿದ್ದಿದ್ದು, ಅದನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಅಭಿವೃದ್ಧಿ ಪಡಿಸಲಾಗುವುದು. ಕೃಷ್ಣಮೃಗ ಅಭಯಾರಣ್ಯ ಸೇರಿ ರಾಣೆಬೆನ್ನೂರಿನ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು. ರಾಣೆಬೆನ್ನೂರನ್ನು ಅಕ್ಷರಸ್ಥರ ನಾಡು ಮಾಡಲು ಶ್ರಮಿಸಲಾಗುವುದು ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ವಾಣಿಜ್ಯ ನಗರವು ಸಾಂಸ್ಕೃತಿಕ ನಾಡಾಗಿ ಪರಿವರ್ತನೆಯಾಗಿದೆ. ವಿಶ್ವದಲ್ಲಿಯೇ ಕನ್ನಡ ಭಾಷೆಗೆ ವಿಶೇಷ ಗೌರವವಿದೆ. ಕನ್ನಡ ಉಳಿಸುವ ಕೆಲಸದಲ್ಲಿ ಸ್ಥಳೀಯ ಜನತೆ ಹೆಚ್ಚಿನ ಆಸ್ಥೆ ವಹಿಸಿದ್ದಾರೆ ಎಂದರು.
    ಹಿರಿಯ ಸಾಹಿತಿ ಜೆ.ಎಂ. ಮಠದ ಸರ್ವಾಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರಿನ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡಿದರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕಾರ್ಯಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಸಂಚಾಲಕ ಡಾ. ಕೆ.ಎಚ್. ಮುಕ್ಕಣ್ಣನವರ, ವಾಸಣ್ಣ ಲದ್ವಾ, ವಾಸಪ್ಪ ಕುಸಗೂರ, ವಿ.ಪಿ. ಲಿಂಗನಗೌಡ್ರ, ಜಿ.ಜಿ. ಹೊಟ್ಟಿಗೌಡ್ರ, ರುಕ್ಮಿಣಿ ಸಾವಕಾರ, ಡಾ. ಗಣೇಶ ದೇವಗಿರಿಮಠ, ಚೋಳಪ್ಪ ಕಸವಾಳ, ಪ್ರಕಾಶ ಜೈನ್, ಪ್ರಕಾಶ ಬುರಡಿಕಟ್ಟಿ, ನೀಲಕಂಠಪ್ಪ ಕುಸಗೂರ ಹಾಗೂ ನಗರಸಭೆ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ಸ್ವಾಗತಿಸಿದರು. ಜಯಶ್ರೀ ಮುರಡೆಪ್ಪನವರ ಹಾಗೂ ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts