More

    ಪರಸ್ಪರ ಅಂತರ ಮರೆತ ಜನ

    ಹುಬ್ಬಳ್ಳಿ: ಬಿಕೋ ಎನ್ನುತ್ತಿರುವ ಮಾರುಕಟ್ಟೆ, ಬಸ್ ನಿಲ್ದಾಣ… ರಸ್ತೆ ಪಕ್ಕ ಪರಸ್ಪರ ಅಂತರ ಮರೆತು ಖರೀದಿಗೆ ಮುಗಿಬಿದ್ದಿರುವ ಜನ…ಮುಂದುವರಿದ ವಾಹನ ಹಾಗೂ ಜನ ದಟ್ಟಣೆ…

    ನಗರದಲ್ಲಿ ಗುರುವಾರ ಕಂಡುಬಂದ ದೃಶ್ಯಗಳಿವು. ಕೆಲ ವಿನಾಯಿತಿ ಮಧ್ಯೆ ಲಾಕ್​ಡೌನ್ ಮುಂದುವರಿದಿದ್ದರೂ ಜನರು ಪರಸ್ಪರ ಅಂತರ ಕಾಯ್ದು ಕೊಳ್ಳುವುದನ್ನೇ ಮರೆತಂತೆ ವರ್ತಿಸುತ್ತಿರುವುದು ಕಂಡುಬಂದಿತು.

    ಜನತಾ ಬಜಾರ್, ಎಂ.ಜಿ. ಮಾರ್ಕೆಟ್ ಸೇರಿ ಇತರ ಪ್ರಮುಖ ಮಾರುಕಟ್ಟೆ ಒಳಗೆ ದಿನಸಿ ಅಂಗಡಿ, ಹೂವಿನ ಅಂಗಡಿ ತೆರೆದಿದ್ದರೂ ತರಕಾರಿ ಹಾಗೂ ಹಣ್ಣುಗಳ ವ್ಯಾಪಾರಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಮಾರುಕಟ್ಟೆ ಒಳಗಿನ ಪ್ರದೇಶ ಜನರಿಲ್ಲದೇ ಭಣಗುಡುತ್ತಿತ್ತು. ಆದರೆ, ಮಾರುಕಟ್ಟೆ ಸುತ್ತಲಿನ ರಸ್ತೆಗಳ ಪಕ್ಕ ಹಣ್ಣು, ತರಕಾರಿ ಮಾರಾಟ ತುರುಸಿನಿಂದ ನಡೆದಿದ್ದರಿಂದ ಜನರು ಪರಸ್ಪರ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದರು.

    ನಗರದ ಬಹುತೇಕ ಬಡಾವಣೆಗಳಲ್ಲಿಯೂ ತರಕಾರಿ, ಹಣ್ಣಿನ ವ್ಯಾಪಾರ ಮುಂದುವರಿದಿದೆ. ವ್ಯಾಪಾರಸ್ಥರು ಪರಸ್ಪರ ಅಂತರ ಕಾಯ್ದುಕೊಂಡು ಒಬ್ಬರಿಗೊಬ್ಬರು ದೂರ ಕುಳಿತು ವ್ಯಾಪಾರ ನಡೆಸುತ್ತಿದ್ದರೂ, ಜನರು ಪರಸ್ಪರ ಅಂತರವನ್ನೇ ಮರೆತು ಖರೀದಿಯಲ್ಲಿ ತೊಡಗಿರುವ ದೃಶ್ಯ ನಿತ್ಯ ಕಾಣಿಸುತ್ತಿದೆ.

    ಸಿಬಿಟಿ ಮತ್ತು ಹಳೇ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಬಸ್​ಗಾಗಿ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಾಣುತ್ತಿದೆ. ಬಸ್ ನಿಲ್ದಾಣ ಪ್ರವೇಶಿಸುವ ಮೊದಲು ಪ್ರತಿ ಪ್ರಯಾಣಿಕರನ್ನು ತಪಾಸಣೆ (ಥರ್ಮಲ್ ಸ್ಕ್ರೀನಿಂಗ್)ಗೆ ಒಳಪಡಿ ಸಲಾಗುತ್ತಿದೆ. ಬಸ್​ನಲ್ಲಿ ಗರಿಷ್ಠ 30 ಜನರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಬಹುತೇಕ ಆಸನಗಳು ಖಾಲಿ ಇವೆ.

    ಕೋವಿಡ್ ಪರೀಕ್ಷೆ: ಪ್ರತಿ ಗರ್ಭಿಣಿಯರ ಕೋವಿಡ್ ಪರೀಕ್ಷೆ ನಡೆಸುವುದು ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ ನಗರದ ಚಿಟಗುಪ್ಪಿ ಆವರಣದಲ್ಲಿ ಗರ್ಭಿಣಿಯರ ಪರೀಕ್ಷೆ ನಡೆಸಲಾಗುತ್ತಿದೆ. ಇದರೊಂದಿಗೆ ಸೋಂಕಿತರ ದ್ವಿತೀಯ ಮತ್ತು ತೃತೀಯ ಸಂಪರ್ಕಕ್ಕೆ ಬಂದವರ ಕೋವಿಡ್ ಪರೀಕ್ಷೆಯನ್ನೂ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುತ್ತಿದೆ. ನಿತ್ಯ 40ರಿಂದ 50 ಗರ್ಭಿಣಿಯರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರ ಪರೀಕ್ಷೆ ನಡೆಸಲಾಗುತ್ತಿದೆ.

    ಜನ ಔಷಧ ಕೇಂದ್ರ: ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಒಂದೆರಡು ದಿನಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರ ಪ್ರಾರಂಭಗೊಳ್ಳಲಿದೆ. ಜನ ಔಷಧ ಕೇಂದ್ರಕ್ಕೆ ಎಲ್ಲ ಸಿದ್ಧತೆ ನಡೆಸಲಾಗಿದ್ದು, ಗುರುವಾರದಂದು ಬಣ್ಣ ಬಳಿಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts