More

    ಪತ್ರಿಕೆ ಓದುವ ಮನೋಭಾವ ಬೆಳೆಯಬೇಕು : ವಿಚಾರಸಂಕಿರಣದಲ್ಲಿ ತಮಿಳುನಾಡು ಕೇಂದ್ರೀಯ ವಿವಿ ಮಾಜಿ ಉಪಕುಲಪತಿ ಪ್ರೊ.ಬಿ.ಪಿ. ಸಂಜಯ್​ ಅಭಿಮತ

    ಕೋಲಾರ: ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್​ ಸಂಸತಿಯ ನಡುವೆಯೂ ಪತ್ರಿಕೆಗಳು ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಜನರು ಸಹ ಓದುವ ಪ್ರವೃತ್ತಿಯಿಂದ ದೂರವಾಗದೆ ಜ್ಞಾನವೃದ್ಧಿಗಾಗಿ ಪತ್ರಿಕೆ ನಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಬಿ.ಪಿ. ಸಂಜಯ್​ ತಿಳಿಸಿದರು.
    ನಗರದ ಹೊರವಲಯದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರದಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಸವಾಲುಗಳ ಕುರಿತು 2ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿಂದಿನ ದಿನಗಳಲ್ಲಿ ಪ್ರಸರಣ ಸಂಖ್ಯೆ ಕಡಿಮೆಯಿದ್ದರೂ ಪತ್ರಿಕೆಗಳ ಪ್ರಭಾವ ಹೆಚ್ಚಿರುತ್ತಿತ್ತು. ಸುದ್ದಿಯೊಂದು ಪ್ರಕಟವಾದರೆ ಅದಕ್ಕೆ ಸಂಬಂಧಿಸಿದವರು ಕೂಡಲೇ ಸ್ಪಂದಿಸುತ್ತಿದ್ದರು. ಪತ್ರಿಗಳಿಗೆ ತನ್ನದೇ ಆದ ಘನತೆ, ಗೌರವ ಇರುತ್ತಿತ್ತು. ಆದರೆ ಇತ್ತೀಚೆಗೆ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಭಿತ್ತರವಾಗತೊಡಗಿದ ನಂತರ ಪ್ರಭಾವ ಕೊಂಚಮಟ್ಟಿಗೆ ತಗ್ಗಿದೆ ಎನಿಸಿದರೂ, ಇಂದಿಗೂ ಹಲವು ಪತ್ರಿಕೆಗಳು ಪ್ರಭಾವಶಾಲಿಯಾಗಿ ಮುಂದುವರಿದಿವೆ ಎಂದರು.
    ಪ್ರಸ್ತುತ ಕಾರ್ಪೊರೇಟ್​ ಸಂಸ್ಥೆಗಳು ಪತ್ರಿಕೋದ್ಯಮವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ. ಅಂತಹ ಸಂಸ್ಥೆಗಳ ವ್ಯಾಪಾರ ಮನೋಭಾವದಿಂದಾಗಿ ಜನತೆಗೆ ಅಗತ್ಯವಿರುವ ಸುದ್ದಿ, ಲೇಖನಗಳನ್ನು ಸಂಪಾದಕೀಯ ವಿಭಾಗವು ತಲುಪಿಸಲು ಹೆಣಗಾಡುವ ಪರಿಸ್ಥಿತಿ ಕೆಲವೆಡೆ ನಿಮಾರ್ಣವಾಗಿದೆ. ಆದರೂ ಸಹ ಹಲವು ಪ್ರಭಾವಿ ಪತ್ರಿಕೆಗಳ ಸಂಪಾದಕೀಯ ಮಂಡಳಿಗಳು ಜನರ ಹಿತ, ಹೊಸ ಚಿಂತನೆಗಳನ್ನು ಜನರಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ವಿದೇಶದ ಕಾರ್ಪೊರೇಟ್​ ಜಗತ್ತು ಪತ್ರಿಕೋದ್ಯಮ ಆಳಲು ಹೊರಟರೆ ನಮಗೆ ಏನು ಬೇಕು ಬೇಡ ಎಂಬ ಬಗ್ಗೆ ಅವರೇ ನಿರ್ಧರಿಸುತ್ತಾರೆ ಎಂದರು.
    ಪತ್ರಿಕೋದ್ಯಮದ ಪ್ರಾರಂಭಿಕ ದಿನಗಳಲ್ಲಿ ಬೇರೆ ಬೇರೆ ದೇಶದ ಮಾಧ್ಯಮ ಜಗತ್ತು ಭಾರತವನ್ನು ನೋಡಿ ಕಲಿಯುವಷ್ಟು ಪ್ರಭಲವಾಗಿತ್ತು. ವಿದೇಶಿ ಸಂಸತಿ, ಪರಂಪರೆಯನ್ನು ಹೊರಗಿಡುವಷ್ಟು ಶಕ್ತಿಯುತವಾಗಿತ್ತು. ಆದರೆ ಕೆಲವು ವಿದೇಶಿ ಸಂಸ್ಥೆಗಳು ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದ ನಂತರ ಪತ್ರಿಕೋದ್ಯಮ ಜನರ ಧ್ವನಿಯಾಗಿ ಉಳಿದಿಲ್ಲವೇನೋ ಎನಿಸುತ್ತಿದೆ. ಪ್ರಸ್ತುತ ಪತ್ರಿಕೋದ್ಯಮವು ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದು, ಸರ್ಕಾರಗಳು ಮುದ್ರಣ ಮಾಧ್ಯಮದ ನೆರವಿಗೆ ಬರಬೇಕಿದೆ. ಜನರೂ ಸಹ ಪತ್ರಿಕೆಗಳನ್ನು ಹೆಚ್ಚಾಗಿ ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
    ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ್​ ವಾನಳ್ಳಿ ಮಾತನಾಡಿ, ಪತ್ರಕರ್ತರು ಸಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ವೃತ್ತಿಗೌರವ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಜನರ ವಿಶ್ವಾಸಗಳಿಸಬೇಕು ಎಂದರು.
    ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ, ವಿಚಾರ ಸಂಕಿರಣದ ಸಂಚಾಲಕ ಡಾ.ಆರ್​ ಮಂಜುನಾಥ್​, ಎ.ವಿ.ಸಂಪ್ರೀತಿ, ಮೋಹನ್​ ಕುಮಾರ್​ ಮುಂತಾದವರು ಇದ್ದರು.

    ಬದಲಾವಣೆ ಅಗತ್ಯ: ಮಾಧ್ಯಮಗಳ ಮೇಲೆ ಕಾರ್ಪೊರೇಟ್​ ಸಂಸ್ಥೆಗಳ ಸಿದ್ಧಾಂತ ಹೇರುವ ಕೆಲಸವಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಾಗಿದೆ. ಪತ್ರಕರ್ತರು ಸಮಾಜಮುಖಿ ಸಿದ್ಧಾಂತ ರೂಢಿಸಿಕೊಳ್ಳಬೇಕು. ತಾಂತ್ರಿಕತೆ ಎಷ್ಟೇ ಬೆಳೆದರೂ ಓದುವ ಪ್ರವೃತ್ತಿಯಿಂದ ವಿಮುಖರಾಗಬಾರದು. ಪತ್ರಿಕೆಗಳನ್ನು ಓದುವುದರಿಂದ ವ್ಯಕ್ತಿತ್ವ ಬೆಳವಣಿಗೆ ಕಾಣುತ್ತದೆ ಎಂಬುದನ್ನು ಮಾಧ್ಯಮಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts