More

    ಪತಿ ಜತೆಗೆ ಹೋಗಲು ಒಪ್ಪದ ಮಹಿಳೆಗೆ ಥಳಿತ: ದಿಬ್ಬೂರಹಳ್ಳಿ ಪೊಲೀಸರ ಗೂಂಡಾವರ್ತನೆ ಕಾಲಿನಿಂದ ಒದೆಯುವ ವಿಡಿಯೋ ವೈರಲ್

    ಚಿಕ್ಕಬಳ್ಳಾಪುರ: ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಸಂಬಂಧಿಯೊಂದಿಗೆ ಪರಾರಿಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿದ ದಿಬ್ಬೂರಹಳ್ಳಿ ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದು ಥಳಿಸಿರುವುದಲ್ಲದೆ ಬೂಟುಗಾಲಿನಿಂದ ಒದೆಯುತ್ತಿರುವ ವಿಡಿಯೋ ಗುರುವಾರ ವೈರಲ್ ಆಗಿದೆ.
    ಪಿಎಸ್‌ಐ ಪಾಪಣ್ಣ ನೇತೃತ್ವದಲ್ಲೇ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ಇಲ್ಲದ ಠಾಣೆಯಲ್ಲಿ ಮನಬಂದಂತೆ ಥಳಿಸಿರುವ ಖಾಕಿ ಗೂಂಡಾವರ್ತನೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಘಟನೆಯ ಹಿನ್ನೆಲೆ: ಹಲ್ಲೆಗೊಳಗಾದ ಮಹಿಳೆ ಸ್ಥಳೀಯ ಇಟ್ಟಿಗೆ ಕಾರ್ಖಾನೆಯಲ್ಲಿ ಗಂಡನೊಂದಿಗೆ ಕೆಲಸ ಮಾಡುತ್ತಿದ್ದಳು. ಆದರೆ, ಪತಿ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಬೇಸರಗೊಂಡಿದ್ದ ಮಹಿಳೆ ಸಂಬಂಧಿಯ ಜತೆಗೆ ಓಡಿ ಹೋಗಿದ್ದಾಳೆ. ಕಾರ್ಖಾನೆ ಮಾಲೀಕ ಡಿ.ಜಿ.ರಾಮಚಂದ್ರ ಮೌಖಿಕವಾಗಿ ದೂರು ನೀಡಿದ್ದರಿಂದ ಪೊಲೀಸರು ಮಹಿಳೆ ಮತ್ತು ಸಂಬಂಧಿಯನ್ನು ಕರೆದುಕೊಂಡು ಬಂದು ಥಳಿಸಿದ್ದಾರೆ. ಗಂಡನೊಂದಿಗೆ ಹೋಗಲು ಮಹಿಳೆ ನಿರಾಕರಿಸಿದ್ದೇ ಥಳಿತಕ್ಕೆ ಕಾರಣ ಎನ್ನಲಾಗಿದೆ.

    ಪೊಲೀಸ್ ವರಿಷ್ಠಾಧಿಕಾರಿ ದೂರು: ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿವೆ. ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಅಧ್ಯಕ್ಷ ಕೆ.ಎಸ್.ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.

    ಗೂಂಡಾ ವರ್ತನೆ ಇದೇ ಮೊದಲಲ್ಲ…!: ದಿಬ್ಬೂರಹಳ್ಳಿ ಠಾಣೆಯಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ-ಸಂಧಾನದ ಬಳಿಕ ಠಾಣೆಗೆ ಮಾಹಿತಿ ನೀಡಲು ತೆರಳಿದ್ದ ಗ್ರಾಮಸ್ಥನೊಬ್ಬನನ್ನು ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ ಥಳಿಸಿದ್ದ ಪ್ರಕರಣ ಅಕ್ಟೋಬರ್‌ನಲ್ಲಿ ನಡೆದಿತ್ತು, ಈಗ ಮಹಿಳೆಯನ್ನು ಥಳಿಸಿರುವುದು ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts