More

  ಧರ್ಮ ಬಿಟ್ಟು ನಡೆದರೆ ಅಪಾಯ

  ಕಾಳಗಿ: ವೀರಶೈವ ಧರ್ಮದ ಸಂಸ್ಥಾಪನಾಚಾರ್ಯ ಜಗದ್ಗುರು ಶ್ರೀ ರೇಣುಕಾಚಾರ್ಯರ ಜೀವನ, ತತ್ವ ಸಿದ್ಧಾಂತಗಳು ಸುಖ-ಶಾಂತಿ ಹಾಗೂ ಸಮೃದ್ಧ ಬಾಳಿಗೆ ಮೂಲ ಸೆಲೆಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

  ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಧರ್ಮ ಜಾಗೃತಿ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕರ್ಮವನ್ನು ಕಳೆದು ಧರ್ಮ ಬಿತ್ತಿ ಬದುಕು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಬಾಳಿನ ಭಾಗ್ಯೋದಯಕ್ಕೆ ಧರ್ಮವೇ ದಿಕ್ಸೂಚಿ. ಧರ್ಮದ ದಾರಿ ಮೀರಿ ನಡೆದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

  ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಅರಿವು ಆದರ್ಶಗಳ ಮೂಲಕ ಕಟ್ಟಿಕೊಳ್ಳಬೇಕಾಗಿದೆ. ಜೀವನ ಉನ್ನತಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಸಕಲರಿಗೆ ದಾರಿದೀಪವಾಗಿವೆ. ನೊಂದವರ, ಬೆಂದವರ ಧ್ವನಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಗೈದು ಜನಕಲ್ಯಾಣ ಮಾಡಿದ್ದನ್ನು ಮರೆಯಲಾಗದು. ಅಸ್ಪೃಶ್ಯರ ಉದ್ಧಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ, ರೈತ ಸಮುದಾಯದ ಹಿತಕ್ಕಾಗಿ ಸದಾ ಶ್ರಮಿಸಿ ಜೀವ ಸಂಕುಲ ಸಂರಕ್ಷಿಸಿದ್ದಾರೆ ಎಂದರು.

  ನೇತೃತ್ವ ವಹಿಸಿದ್ದ ಹೊನ್ನಕಿರಣಗಿ ಶ್ರೀ ಚಂದ್ರಗುಂಡ ಶಿವಾಚಾರ್ಯ ಮಾತನಾಡಿ, ಕಾಳಗಿ ಇತಿಹಾಸದಲ್ಲೇ ಇದೊಂದು ಅವಿಸ್ಮರಣೀಯ ಸಮಾರಂಭ. ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

  ಶಾಸಕ ಡಾ.ಅವಿನಾಶ ಜಾಧವ್ ಉದ್ಘಾಟಿಸಿ ಮಾತನಾಡಿದರು. ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಮಂಗಲಗಿಯ ಶ್ರೀ ಶಾಂತಸೋಮನಾಥ ಶಿವಾಚಾರ್ಯ, ಕೋಡ್ಲಿಯ ಶ್ರೀ ಬಸವಲಿಂಗ ಶಿವಾಚಾರ್ಯ, ಹೊಸ್ಸಳ್ಳಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ, ರಟಕಲ್‌ನ ಶ್ರೀ ಸಿದ್ಧರಾಮ ಸ್ವಾಮೀಜಿ, ಬಣಮಗಿಯ ಶ್ರೀ ರಾಚೋಟೇಶ್ಚರ ಶಿವಾಚಾರ್ಯ, ಡೊಣ್ಣೂರಿನ ಶ್ರೀ ಪ್ರಶಾಂತ ದೇವರು, ಕಾಳಗಿಯ ಶ್ರೀ ನೀಲಕಂಠ ಮರಿದೇವರು, ಶ್ರೀ ಚಂದ್ರಮೌಳಿ ಮಹಾರಾಜ ಸಮ್ಮುಖ ವಹಿಸಿದ್ದರು.

  ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಜ ಪಾಟೀಲ್ ಗೊಣಗಿ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಮಠ, ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ್, ಜಂಗಮ ಸಮಾಜ ತಾಲೂಕು ಅಧ್ಯಕ್ಷ ಶರಣು ಸಾಲಿಮಠ, ಪ್ರಮುಖರಾದ ಶಿವಶರಣಪ್ಪ ಸೀರಿ, ಶಿವಕುಮಾರ ಕಮಲಾಪುರ, ರಾಜಶೇಖರ ಕುಡ್ಡಳ್ಳಿ, ರಾಜೇಶ ಗುತ್ತೇದಾರ್, ಮಲ್ಲಿನಾಥ ಕೊಲಕುಂದಿ, ನಿಂಬೆಣ್ಣಪ್ಪ ಮಂಗಲಗಿ, ರಾಮಚಂದ್ರ ಜಾಧವ್, ಶರಣಗೌಡ ಪೊಲೀಸ್ ಪಾಟೀಲ್, ಶಿವಶರಣಪ್ಪ ಕಮಲಾಪುರ, ಜಗದೀಶ ಮಾಲಿಪಾಟೀಲ್, ವಿಶ್ವನಾಥ ವನಮಾಲಿ, ಸಂತೋಷ ಪಾಟೀಲ್ ಮಂಗಲಗಿ, ವಿಜಯಕುಮಾರ ಚೆಂಗಟಿ, ರೇವಣಸಿದ್ಧ ಬಡಾ, ಶಶಿಕಲಾ ಟೆಂಗಳಿ, ಶರಣು ಮಜ್ಜಿಗೆ, ರಾಜಶೇಖರ ಗುಡದ, ರಾಘವೇಂದ್ರ ಗುತ್ತೇದಾರ್, ಶೇಖರ ಮಾನಶೆಟ್ಟಿ, ಅಮೃತ ಪಾಟೀಲ್, ಶಿವಕಿರಣ ಪ್ಯಾಟಿಮಠ, ರೇವಣಸಿದ್ದ ಹರಕಂಚಿ, ರವಿ ಬಿರಾದಾರ, ಕಾಳಶೆಟ್ಟಿ ಪಡಶೆಟ್ಟಿ, ಕಾಳಪ್ಪ ಕದ್ದರಗಿ, ಶರಣು ಬಿರಾದಾರ ಇತರರಿದ್ದರು.

  ದೇಶಕ್ಕೊಂದು ಸಂವಿಧಾನ ಇರುವಂತೆ ಧರ್ಮಕ್ಕೊಂದು ನೀತಿ ಸಂಹಿತೆಯಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ. ಅಂಥ ತತ್ವ ಸಿದ್ಧಾಂತಗಳನ್ನು ಅರಿತು ಬಾಳುವುದರಲ್ಲಿ ಮಾನವನ ಶ್ರೇಯಸ್ಸಿದೆ. ಕಾಳಗಿ ತಾಲೂಕು ಕೇಂದ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಭಕ್ತಿ ಶ್ರದ್ಧೆಯಿಂದ ಭವ್ಯ ಸಮಾರಂಭ ಆಯೋಜಿಸಿರುವುದು ಸಂತಸ ತಂದಿದೆ.
  | ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು

  ಪ್ರತಿಯೊಬ್ಬರಿಗೂ ಧರ್ಮ ಬೇಕು. ಅಶಾಂತಿ, ಅಜ್ಞಾನದಿಂದ ತತ್ತರಿಸುತ್ತಿರುವ ಜನ ಸಮುದಾಯಕ್ಕೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸರ್ವಕಾಲಕ್ಕೂ ಅನ್ವಯಿಸುತ್ತವೆ.
  | ಡಾ.ಅವಿನಾಶ ಜಾಧವ್, ಶಾಸಕ

  ವೈದಿಕ ಜ್ಯೋತಿಷ್ಯ ಪಾಠಶಾಲೆಗೆ ಸಂಕಲ್ಪ ಮಾಡಿ: ರಟಕಲ್ (ರೇವಗ್ಗಿ) ಶ್ರೇಷ್ಠ ನೆಲವಾಗಿದ್ದು, ಜಗದ್ಗುರು ಶ್ರೀ ರೇವಣಸಿದ್ಧೇಶ್ವರರು ನೆಲೆಸಿ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ದೇವಸ್ಥಾನ ಆವರಣದಲ್ಲಿ ಸುಂದರವಾದ ವೈದಿಕ ಜ್ಯೋತಿಷ್ಯ ಪಾಠಶಾಲೆ ನಿರ್ಮಿಸುವ ಸಂಕಲ್ಪ ಈ ಭಾಗದ ಭಕ್ತರದು. ಡಾ.ಉಮೇಶ ಜಾಧವ್ ಎರಡನೇ ಸಲ ಸಂಸದರಾಗಿ ಆಯ್ಕೆಯಾಗಲಿದ್ದು, ಜನಹಿತ ಮತ್ತು ಧರ್ಮ ರಕ್ಷಣೆ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ್ ಹಾಗೂ ಸಂಸದ ಡಾ.ಉಮೇಶ ಜಾಧವ್ ಸೇರಿ ವೈದಿಕ ಪಾಠಶಾಲೆ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ರಂಭಾಪುರಿ ಜಗದ್ಗುರುಗಳು ಉಪದೇಶಿಸಿದರು.

  ದಕ್ಷಿಣ ಕಾಶಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ವೈಭವ: ದಕ್ಷಿಣ ಕಾಶಿ ಖ್ಯಾತಿಯ ಕಾಳಗಿಯಲ್ಲಿ ಶ್ರೀ ರೇಣುಕಾಚಾರ್ಯರ ೮ ಅಡಿ ಎತ್ತರದ ಕಂಚಿನ ಮೂರ್ತಿ ಹಾಗೂ ರಂಭಾಪುರಿ ಜಗದ್ಗುರುಗಳ ಅಡ್ಡಪ್ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ರಾಮನಗರ ಬಸವೇಶ್ವರ ವೃತ್ತದಿಂದ ಶುರುವಾದ ಉತ್ಸವ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನವರೆಗೆ ಜರುಗಿತು. ಅಸಂಖ್ಯ ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು. ಸಾಕಷ್ಟು ಜನರು ಜಗದ್ಗುರುಗಳನ್ನು ಹೆಗಲ ಮೇಲೆ ಹೊತ್ತು ಭಕ್ತಿ ಸೇವೆ ಸಲ್ಲಿಸಿದರು. ಮುತ್ತೈದೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಪುರವಂತರ ಕುಣಿತ, ಗರುಡ ಗೊಂಬೆ ಕುಣಿತ, ಭಜನೆ ಗಮನಸೆಳೆದವು. ಬಳಿಕ ರಂಭಾಪುರಿ ಶ್ರೀಗಳು ಪುರಾಣ ಪ್ರಸಿದ್ಧ ನೀಲಕಂಠ ಕಾಳೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts