More

    ಪ್ರೀತಿಸಿ ಮದ್ವೆ ಆದ್ರೂ ಪತಿ ಮನೆ ಎದುರು ಧರಣಿ ಕೂರಬೇಕಾಗಿ ಬಂತು!

    ರಾಣೆಬೆನ್ನೂರ: ಪ್ರೀತಿಸಿ ಮದುವೆಯಾಗಿದ್ದು, ಮನೆಗೆ ಸೇರಿಸಿಕೊಳ್ಳಲು ಒಪ್ಪದ ಕಾರಣ ಪತ್ನಿ ಕುಟುಂಬಸ್ಥರು ಪತಿಯ ಮನೆ ಮುಂದೆ ಧರಣಿ ನಡೆಸಿದ ಘಟನೆ ನಗರದ ಕುರುಬಗೇರಿಯ ಸೊಪ್ಪಿನಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

    ನಗರದ ಪೂಜಾ ಮಣೆಗಾರ ಹಾಗೂ ನವೀನ ಮಾಕನೂರ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ನವೀನನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕಳೆದ ಒಂದೂವರೆ ತಿಂಗಳಿಂದ ನವೀನನ್ನು ಬೇರೆ ಇಟ್ಟಿದ್ದರು. ಹೀಗಾಗಿ, ಪತಿ ನಾಪತೆಯಾಗಿದ್ದಾನೆ ಎಂದು ಶಹರ ಪೊಲೀಸ್ ಠಾಣೆಗೆ ಪೂಜಾ ದೂರು ಸಲ್ಲಿಸಿದ್ದರು. ಪೊಲೀಸರು ಶುಕ್ರವಾರ ನವೀನನ್ನು ಪತ್ತೆ ಹಚ್ಚಿದ್ದಲ್ಲದೆ, ಎರಡೂ ಕುಟುಂಬಗಳ ನಡುವೆ ಕೆಲವರು ರಾಜಿ ಪಂಚಾಯಿತಿ ನಡೆಸಿ ಪತಿಯ ಮನೆಗೆ ಸೇರಿಸಿದ್ದರು. ಆದರೆ, ಸಂಜೆ ವೇಳೆಗೆ ನವೀನ ಕುಟುಂಬಸ್ಥರು ಪೂಜಾಳನ್ನು ಮನೆಯಿಂದ ಹೊರಗೆ ಹಾಕಿ, ಮನೆಗೆ ಬೀಗ ಜಡಿದು ಹೋಗಿದ್ದಾರೆ. ಇದರಿಂದಾಗಿ ನೊಂದು ಪೂಜಾ ಹಾಗೂ ಕುಟುಂಬಸ್ಥರು ಪತಿಯ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಮನೆಯೊಳಗೆ ಸೇರಿಸಿಕೊಳ್ಳುವವರೆಗೂ ಧರಣಿ ಕೈಬಿಡುವುದಿಲ್ಲ ಎಂದೂ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಪೂಜಾ, ‘ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ, ಪತಿಯ ಮನೆಯವರಿಗೆ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ನಾವು ಬೇರೆ ಮನೆಯಲ್ಲಿ ವಾಸವಾಗಿದ್ದೇವು. ಆದರೆ, ಸ್ವಲ್ಪ ದಿನದಲ್ಲಿ ಪತಿ ಮನೆ ಬಿಟ್ಟು ಓಡಿ ಹೋಗಿದ್ದ. ಈ ಕುರಿತು ದೂರು ದಾಖಲಿಸಿದ್ದೆ. ಪತಿ ಸಿಕ್ಕ ನಂತರ ಎರಡೂ ಕುಟುಂಬಗಳ ನಡುವೆ ರಾಜಿ ಪಂಚಾಯಿತಿ ನಡೆಸಿದಾಗ ನನ್ನನ್ನು ಮನೆಗೆ ಸೇರಿಸಿಕೊಳ್ಳುವುದಾಗಿ ಒಪ್ಪಿದ್ದರು. ಮನೆಗೆ ಬಂದ ಬಳಿಕ ನಾವು ಬೇರೆ ಜಾತಿಯವರು ಎಂದು ಮನೆಯಿಂದ ಹೊರ ಹಾಕಿದ್ದಾರೆ. ನಾನು ಮನೆ ಬಿಟ್ಟು ಹೋಗಲ್ಲ. ನನ್ನ ಪತಿಯ ಜತೆ ಬಾಳುತ್ತೇನೆ’ ಎಂದರು.

    ಪೂಜಾಳ ತಂದೆ ರೇವಣ್ಣ ಮಣೆಗಾರ, ತಾಯಿ ಶಾಂತಮ್ಮ ಮಣೇಗಾರ, ಹನುಮಂತಪ್ಪ ದೇವರಗುಡ್ಡ, ಮೃತ್ಯುಂಜಯ ಗುದಿಗೇರ, ಶಿವಪ್ಪ ಮಣೆಗಾರ, ಆನಂದ ಹುಲಬನ್ನಿ, ಭರಮಪ್ಪ ಪೂಜಾರ, ಷಣ್ಮುಖಪ್ಪ ಕಂಬಳಿ, ಮಾಲತೇಶ ಕಂಬಳಿ, ನಿಂಗಪ್ಪ ಗೌಡ್ರ, ಮಂಜು ಮಣೆಗಾರ, ಬಸವಣೆಪ್ಪ ಮಲ್ಲಾಪುರ, ಗೋಣೆಪ್ಪ ಹರಪನಹಳ್ಳಿ ಇತರರು ಧರಣಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts