More

    ನೇರ ಪಾವತಿಯಡಿ 20 ಲಕ್ಷ ಉಳಿತಾಯ!

    ಸಂತೋಷ ವೈದ್ಯ ಹುಬ್ಬಳ್ಳಿ

    ಅವಳಿ ನಗರದಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುವ 1001 ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ಪಾವತಿಯಡಿ ತಂದಿರುವುದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಡಿಸೆಂಬರ್ (2020) ತಿಂಗಳ ವೇತನ ಪಾವತಿಯಲ್ಲಿ 20 ಲಕ್ಷ ರೂ. ಉಳಿತಾಯ ಸಾಧಿಸಿದೆ!

    3 ವರ್ಷಗಳ ತಿಕ್ಕಾಟದ ಬಳಿಕ ಪಾಲಿಕೆಯು ಇತ್ತೀಚೆಗೆ ನೇರ ವೇತನ ಪಾವತಿಯನ್ನು ಅನುಷ್ಠಾನಕ್ಕೆ ತಂದಿದೆ. ಈ ವ್ಯವಸ್ಥೆಯಡಿ ಪ್ರಪ್ರಥಮವಾಗಿ ಡಿಸೆಂಬರ್ ತಿಂಗಳ ವೇತನವನ್ನು ಪೌರ ಕಾರ್ವಿುಕರು ಜನವರಿಯಲ್ಲಿ ಪಡೆದಿದ್ದಾರೆ. 2021ರ ಜನವರಿ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ.

    2020ರ ನವೆಂಬರ್ ತಿಂಗಳಲ್ಲಿ ಎಲ್ಲ ಗುತ್ತಿಗೆ ಪೌರ ಕಾರ್ವಿುಕರಿಗೆ ಪಾಲಿಕೆಯು ವೇತನ ರೂಪದಲ್ಲಿ 3.37 ಕೋಟಿ ರೂ. ಪಾವತಿಸಿತ್ತು. ಡಿಸೆಂಬರ್ ತಿಂಗಳಿಗೆ ಅನ್ವಯವಾಗುವಂತೆ 3.17 ಕೋಟಿ ರೂ. ಪಾವತಿಸಿದೆ. ಸ್ವಚ್ಛತೆ ಗುತ್ತಿಗೆದಾರರಿಗೆ ಸಂದಾಯವಾಗುತ್ತಿದ್ದ ಸೇವಾ ಶುಲ್ಕ ಅನ್ವಯವಾಗದಿರುವುದರಿಂದ 11.81 ಲಕ್ಷ ರೂ. ಹಾಗೂ ಪೌರ ಕಾರ್ವಿುಕರ ಗೈರು ಹಾಜರಿಯಿಂದ ಪಾಲಿಕೆಗೆ 8.19 ಲಕ್ಷ ರೂ. ಉಳಿತಾಯವಾಗಿದೆ. ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದ್ದು, ಗೈರನ್ನು ಇದೀಗ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಕೆಲಸಕ್ಕೆ ಹಾಜರಾಗದಿದ್ದರೆ ಅಂದಿನ ವೇತನ ಕಡಿತ ನಿಶ್ಚಿತ.

    ಸೇವಾ ಶುಲ್ಕ ಶೇ.7.5: ಸ್ವಚ್ಛತೆ ಗುತ್ತಿಗೆದಾರರಿಗೆ ಪಾಲಿಕೆ ಶೇ.7.5 ರಷ್ಟು ಸೇವಾ ಶುಲ್ಕ ಪಾವತಿಸುತ್ತದೆ. ನಿಯೋಜಿಸಲ್ಪಟ್ಟ ಪ್ರತಿ ಪೌರ ಕಾರ್ವಿುಕನಿಗೆ ಸಂದಾಯವಾಗುವ ವೇತನಕ್ಕೆ ಅನುಗುಣವಾಗಿ ಸೇವಾ ಶುಲ್ಕ ನೀಡಲಾಗುತ್ತದೆ. ನೇರ ಪಾವತಿಯಡಿ ಬಂದಿರುವ 1001 ಪೌರ ಕಾರ್ವಿುಕರು ಮಾಸಿಕ 15,733 ರೂ. (ಇಪಿಎಫ್, ಇಎಸ್​ಐ ಮೊತ್ತ 2006 ರೂ. ಕಡಿತ ಸೇರಿ) ವೇತನ ಪಡೆಯುತ್ತಾರೆ. ಅಂದರೆ, ಪ್ರತಿ ಪೌರ ಕಾರ್ವಿುಕನ ಲೆಕ್ಕದಲ್ಲಿ ಪಾಲಿಕೆಯು ಸೇವಾ ಶುಲ್ಕವೆಂದು ಸ್ವಚ್ಛತೆ ಗುತ್ತಿಗೆದಾರರಿಗೆ ಮಾಸಿಕ 1180 ರೂ. ಪಾವತಿಸುತ್ತಿತ್ತು.

    ಸ್ವಚ್ಛತೆ ಗುತ್ತಿಗೆ ಜೀವಂತ: ಹು-ಧಾ ಅವಳಿನಗರದಲ್ಲಿ ಈಗಲೂ ಸ್ವಚ್ಛತೆ ಗುತ್ತಿಗೆ ವ್ಯವಸ್ಥೆ ಜೀವಂತವಿದೆ. 1001 ಪೌರ ಕಾರ್ವಿುಕರು ನೇರ ವೇತನ ಪಾವತಿಯಡಿ ಬಂದರೂ 55 ಜನ ಸ್ವಚ್ಛತೆ ಗುತ್ತಿಗೆದಾರರು ಇದ್ದಾರೆ. ಇವರ ಬಳಿ ಈಗಲೂ 738 ಗುತ್ತಿಗೆ ಪೌರ ಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಪಾಲಿಕೆ ಹೆಚ್ಚುವರಿ ಎಂದು ಪರಿಗಣಿಸಿದೆ. ಇವರ ವೇತನಕ್ಕೆ ಏನೂ ಸಮಸ್ಯೆ ಇಲ್ಲ. ಆದರೆ, ಗುತ್ತಿಗೆದಾರರ ಮೂಲಕ ವೇತನ ಪಾವತಿಯಾಗುತ್ತದೆ. ಗುತ್ತಿಗೆ ಪದ್ಧತಿ ಶೋಷಣೆ-ದಬ್ಬಾಳಿಕೆಗೆ ದಾರಿಯಾಗಿದೆ. ಕಳೆದ 28 ವರ್ಷಗಳಿಂದ ಅವಳಿನಗರದಲ್ಲಿ ಸ್ವಚ್ಛತೆ ಗುತ್ತಿಗೆ ಪದ್ಧತಿ ಜಾರಿಯಲ್ಲಿದೆ. ಗುತ್ತಿಗೆದಾರರು, ಪೌರ ಕಾರ್ವಿುಕರ ಪಾಲಿನ ಇಎಸ್​ಐ, ಪಿಎಫ್ ವಂತಿಗೆಯನ್ನು ಇಲಾಖೆಗೆ ಪಾವತಿಸದೇ ವಂಚಿಸಿದ್ದಾರೆ. 3 ಕೋಟಿ ರೂ. ಪಿಎಫ್ ಹಣವನ್ನು ಅವಳಿನಗರದ ಸ್ವಚ್ಛತೆ ಗುತ್ತಿಗೆದಾರರು ಗುಳುಂ ಮಾಡಿರುವ ಬಗ್ಗೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್​ಒ) ಹುಬ್ಬಳ್ಳಿ ಉಪ ಪ್ರಾಂತೀಯ ಕಚೇರಿ 2014ರಲ್ಲಿ ಪತ್ತೆ ಮಾಡಿ ಪಾಲಿಕೆಗೆ ನೋಟಿಸ್ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೆಚ್ಚುವರಿ 738 ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ಪಾವತಿಯಡಿ ತರಬೇಕೆಂದು ಕಳೆದ 2 ತಿಂಗಳಿಂದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಜತೆ ಪತ್ರ ವ್ಯವಹಾರ ನಡೆಸುತ್ತಿದ್ದೇವೆ. ಇನ್ನು ಕೆಲವು ದಿನ ನೋಡಿ ಪಾಲಿಕೆ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಧಾರವಾಡ ಜಿಲ್ಲಾ ಎಸ್​ಸಿ, ಎಸ್​ಟಿ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದ್ದಾರೆ.

    1001 ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ಪಾವತಿಯಡಿ ತರಲಾಗಿದೆ. ಹೀಗಾಗಿ, ಸ್ವಚ್ಛತೆ ಗುತ್ತಿಗೆದಾರರಿಗೆ ಪಾವತಿಯಾಗುತ್ತಿದ್ದ ಸೇವಾ ಶುಲ್ಕದಿಂದ ಹಾಗೂ ಪೌರ ಕಾರ್ವಿುಕರ ಗೈರಿನಿಂದ ಡಿಸೆಂಬರ್ ತಿಂಗಳ ವೇತನ ಪಾವತಿಯಲ್ಲಿ 20 ಲಕ್ಷ ರೂ. ಉಳಿತಾಯವಾಗಿದೆ. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts