More

    ಭೂಹೀನ ಬಡವರಿಗೆ ಭೂಮಿ ಹಂಚಲು ರಾಜ್ಯಪಾಲರಿಗೆ ಒತ್ತಾಯ

    ಚಿಕ್ಕಮಗಳೂರು: ರಾಜ್ಯಸರ್ಕಾರ ಒತ್ತುವರಿ ಭೂಮಿ ಗುತ್ತಿಗೆ ಕೊಡುವ ಆದೇಶವನ್ನು ರದ್ದು ಪಡಿಸಿ, ಭೂಹೀನ ಬಡವರಿಗೆ ಹಂಚಿಕೆ ಮಾಡಬೇಕು ಎಂದು ವಿವಿಧ ದಲಿತ ಸಂಘರ್ಷ ಸಮಿತಿಗಳ ಮುಖಂಡರು ಸೋಮವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ನಾಲ್ಕು ಜಿಲ್ಲೆಯಲ್ಲಿ ಒಟ್ಟಾರೆ ೭೬,೮೪೫ ಎಕರೆ ಭೂ ಪ್ರದೇಶವನ್ನು ಸರ್ಕಾರ ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕತೆಯಿರುವ ಭೂಮಿ ಕಾಯ್ದಿರಿಸಿ ಉಳಿಕೆ ಭೂಮಿಯನ್ನು ಎಲ್ಲ ಜನಾಂಗದ ಭೂಹೀನ ಬಡವರಿಗೆ, ಪೌರಕಾರ್ಮಿಕರಿಗೆ ಹಂಚಬೇಕು ಎಂದು ಒತ್ತಾಯಿಸಿದರು.
    ಬಡವರು ಅಕ್ರಮ ಸಾಗುವಳಿ ಮಾಡಿರುವ ಭೂಮಿಗೆ ಫಾರಂ ನಂ.೫೦, ೫೩, ೫೭ರಡಿಯಲ್ಲಿ ನಿಯಮಾನುಸಾರ ಹಕ್ಕು ಪತ್ರ ನೀಡಬೇಕು. ೨೦೦೫ಕ್ಕಿಂತ ಮೊದಲು ಸಾಗುವಳಿ ಮಾಡಿಕೊಂಡಿರುವ ನಗರವ್ಯಾಪ್ತಿ ಸಾಗುವಳಿದಾರರಿಗೆ ಹಕ್ಕುಪತ್ರ ಬಾಕಿರುವುದನ್ನು ಪರಿಶೀಲಿಸಿ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
    ಕಳೆದ ಐದು ದಶಕಗಳಿಂದ ಉಳ್ಳವರ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಭೂಹೀನ ಬಡವರಿಗೆ ಹಂಚುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಹಿಂದಿನ ಸರ್ಕಾರ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದನ್ನು ವಿರೋಧಿಸಿತ್ತು. ಇದೀಗ ಭೂಮಿ ಕಾಯ್ದಿರಿಸಿ ಬಡವರಿಗೆ ಹಂಚುವಂತೆ ಒತ್ತಾಯಿಸಿದ್ದರೂ ಬಡವರ ಪರ ಎಂದು ಹೇಳಿಕೊಳ್ಳುವ ರಾಜ್ಯಸರ್ಕಾರ ಉಳ್ಳವರ ಪರ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
    ಈಗಾಗಲೇ ರಾಜ್ಯದಲ್ಲಿ ನಿವೇಶನರಹಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಅಂಗನವಾಡಿ, ಆರೋಗ್ಯ ಕೇಂದ್ರ ಹಾಗೂ ಮಕ್ಕಳಿಗೆ ಆಟದ ಮೈದಾನವಿಲ್ಲ. ಗ್ರಾಮದ ಮಧ್ಯದಲ್ಲೇ ಶಾಲೆಗಳಿರುವ ಹಿನ್ನೆಲೆಯಲ್ಲಿ ಗದ್ದಲದಲ್ಲೇ ಕಲಿಕೆ ಮಾಡಲಾಗುತ್ತಿದೆ. ಅಲ್ಲದೇ ಅನೇಕ ಗ್ರಾಮಗಳಿಗೆ ಸ್ಮಶಾನ ಭೂಮಿ ನಿಗದಿಯಾಗಿಲ್ಲ. ಪ್ರತಿನಿತ್ಯವು ಕಾಡಾನೆಗಳ ಹಿಂಡು ಗ್ರಾಮದೊಳಗೆ ಪ್ರವೇಶಿಸಿ ಜನರ ಪ್ರಾಣ ಮತ್ತು ಆಸ್ತಿಯನ್ನು ಹಾನಿಗೊಳಿಸುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
    ಈ ನಡುವೆ ಸರ್ಕಾರ ಭೂಮಿ ಗುತ್ತಿಗೆ ಕೊಡುವ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ಭೂಮಿಯನ್ನು ರಕ್ಷಿಸಿ ಬಡವರು ಹಾಗೂ ಭೂಹೀನರಿಗೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.
    ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಪ್ರಮುಖರಾದ ಬಾಲಕೃಷ್ಣ, ಎ.ಸಿ.ಜಯರಾಮಯ್ಯ, ಚಂದ್ರು ಪುರ, ವಿ.ಧರ್ಮೇಶ್, ಟಿ.ಎಲ್.ಗಣೇಶ್, ಆರ್.ಶೇಖರ್, ಇಲಿಯಾಜ್ ಅಹಮ್ಮದ್, ರಂಗಪ್ಪ, ಎಚ್.ಎಸ್.ವಿನೀತ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts