More

    ನೂತನ ವಸತಿ ಸಮುಚ್ಚಯಕ್ಕೆ ಪ್ರಸ್ತಾವ, ಜಿಲ್ಲಾಧಿಕಾರಿ ಶಿವಾನಂದ

    ದಾವಣಗೆರೆ: ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ವಸತಿ ಗೃಹಗಳನ್ನು ನೆಲಸಮಗೊಳಿಸಿ, ನೂತನ ಸಮುಚ್ಚಯ ನಿರ್ಮಿಸಲು ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಈಗಾಗಲೇ ಶಿಥಿಲಗೊಂಡಿರುವ ವಸತಿ ಗೃಹಗಳನ್ನು ನೆಲಸಮಗೊಳಿಸಿ, ನೂತನ ವಸತಿ ಗೃಹ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಸೇರಿ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇಲ್ಲ. ಪ್ರತಿನಿತ್ಯ ನೂರಾರು ಸಾರ್ವಜನಿಕರು ಕಚೇರಿಗೆ ಆಗಮಿಸುತ್ತಾರೆ ಮತ್ತು ಆವರಣದಲ್ಲಿ ಹೆಚ್ಚಾಗಿ ಮಳೆ ನೀರು ನಿಲ್ಲುತ್ತಿದೆ. ಈ ಕುರಿತು ಸಮಸ್ಯೆ ಪರಿಹರಿಸಲು ಗಮನ ಹರಿಸಬೇಕು ಎಂದರು.
    ಕೆ.ಆರ್ ರಸ್ತೆಯ ಬಳಿ ಇರುವ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿಯೂ ಶೌಚಗೃಹದ ಸಮಸ್ಯೆ ಬಗೆಹರಿಸಬೇಕು. ಕೋವಿಡ್‌ನಿಂದಾಗಿ ಮೃತಪಟ್ಟ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನ ಇದುವರೆಗೂ ಮೃತ ನೌಕರರ ವಾರಸುದಾರರಿಗೆ ತಲುಪಿಲ್ಲ ಎಂದರು.
    ಆರೋಗ್ಯ ಇಲಾಖೆಯಲ್ಲಿ ಲೆಕ್ಕ ಶೀರ್ಷಿಕೆ ಸಿಬ್ಬಂದಿ ವೇತನ ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಕ್ಷೇತ್ರ ಕಾರ್ಯ ಸಿಬ್ಬಂದಿಗೆ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡುವ ಬಗ್ಗೆ ಸ್ವಯಂಚಾಲಿತ ವೇತನ ಬಡ್ತಿ ಹಾಗೂ ಇಲಾಖಾ ವಿಚಾರಣೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವ ಬಗ್ಗೆ ಚರ್ಚೆ ನಡೆಯಿತು.
    ಕೋವಿಡ್ ಪ್ರೋತ್ಸಾಹ ಧನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ನೀಡಿದಂತೆ ಕಾರ್ಮಿಕ ವಿಮಾ ಆಸ್ಪತ್ರೆ ಸಿಬ್ಬಂದಿಗೂ ನೀಡುವ ಕುರಿತು ಮತ್ತು ಜಿಲ್ಲೆಯ ಹಲವಾರು ಸರ್ಕಾರಿ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಇಲಾಖೆಗಳ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ನಡೆಸಲು ಮಿನಿ ವಿಧಾನಸೌಧದ ಕಟ್ಟಡ ಮಾದರಿಯಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.
    ಸಭೆಯಲ್ಲಿ ಜಿಪಂ ಸಿಇಒ ಡಾ.ಎ.ಚನ್ನಪ್ಪ, ಎಸ್ಪಿ ಸಿ.ಬಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಡಿಎಚ್‌ಒ ಡಾ.ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘದ ತಾಲೂಕು ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts