More

    ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆಗೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ

    ಹಾಸನ: ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ಸೂಚಿಸಿದರು.

    ನಗರದ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ದೇಶಕ್ಕೆ ದೊಡ್ಡ ಪಿಡುಗಾಗಿದೆ. ಇದನ್ನು ತಡೆಗಟ್ಟುವ ಸಲುವಾಗಿ ಶಾಲಾ ಕಾಲೇಜಿನ ಮಕ್ಕಳಿಂದ ಹಿಡಿದು ಅಧಿಕಾರಿ ವರ್ಗದವರೆಗೂ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ಭ್ರಷ್ಟಾಚಾರ ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಅದಕ್ಕೆ ಬಲಿಯಾಗುತ್ತಿರುವುದು ಮಾತ್ರ ಅಂದಿಗೂ, ಇಂದಿಗೂ ಸಾಮಾನ್ಯ ಜನರು. ಸಾರ್ವಜನಿಕರಲ್ಲಿ ಹಣಕ್ಕಾಗಿ ಬೇಡಿಕೆ ಇಡುವ ಅಥವಾ ಇನ್ನಾವುದೋ ರೂಪದ ಸವಲತ್ತು ಪಡೆಯಲು ಒತ್ತಡ ಹೇರುವ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸು ಕಾರ್ಯವನ್ನು ಲೋಕಾಯುಕ್ತ ಮಾಡುತ್ತಿದೆ ಎಂದರು.

    ಕರ್ತವ್ಯ ನಿರ್ವಹಿಸುವಲ್ಲಿ ಸ್ವಜನ ಪಕ್ಷಪಾತ, ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯವನ್ನು ಸಹ ಕರ್ತವ್ಯಲೋಪ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಬ್ಬಂದಿ ಸರ್ಕಾರದ ನಿಯಮಗಳು ಮತ್ತು ಆತ್ಮಸಾಕ್ಷಿಗನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ನೀಡಿದ ದೂರು ತನಿಖೆಯಲ್ಲಿ ಸುಳ್ಳೆಂದು ಸಾಬೀತಾದರೆ ದೂರುದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದ್ದರಿಂದ ಪ್ರಾಮಾಣಿಕ ನೌಕರರಿಗೆ ಯಾವುದೇ ಭಯ ಬೇಡ ಎಂದರು.
    ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ವೇಳೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು ಹಾಗೂ ಅಧಿಕಾರಿಗಳ ನಾಮಫಲಕದಲ್ಲಿ ಹೆಸರು ಮತ್ತು ಹುದ್ದೆ ಎಲ್ಲರಿಗೂ ಗೋಚರಿಸುವಂತಿರಬೇಕು ಎಂದು ಸೂಚನೆ ನೀಡಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಎಂಬುದು ಬಹಳ ಮುಖ್ಯ. ಅದಕ್ಕೆ ಚ್ಯುತಿ ಬಾರದಂತೆ ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವವಹಿಸಬೇಕು. ಒಬ್ಬ ಮಾಡುವ ಬೇಜವಬ್ದಾರಿ ಕೆಲಸದಿಂದ ಇಡೀ ಇಲಾಖೆ ತಲೆ ತಗ್ಗಿಸುವಂತಾಗುತ್ತದೆ. ಸಕಾಲಕ್ಕೆ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ರವಿಕುಮಾರ್ ಅವರು ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ಮುಖ್ಯ ಲೆಕ್ಕಾಧಿಕಾರಿ ಹುಸೇನ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts