More

    ನಿಷೇಧಾಜ್ಞೆ ಗಾಳಿಗೆ ತೂರಿ ಮೀನು ಖರೀದಿ

    ವಿಜಯವಾಣಿ ಸುದ್ದಿಜಾಲ ಶಿರಸಿ: ಲಾಕ್​ಡೌನ್ ಆದೇಶದ ನಡುವೆಯೂ ಭಾನುವಾರ ಬೆಳಗ್ಗೆ ನಗರದ ಹಳೇ ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯಲ್ಲಿ ಜನದಟ್ಟಣೆ ಆಗಿದ್ದನ್ನು ಕಂಡು ಸುತ್ತಲಿನ ನಿವಾಸಿಗಳು ಕಂಗಾಲಾದರು. ವಿಷಯ ತಿಳಿದ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಹೋಗಿ ಜನರನ್ನು ಚದುರಿಸಿದ್ದಲ್ಲದೆ, ಮಾರುಕಟ್ಟೆಗೆ ಬೀಗ ಹಾಕಿದರು.

    ಮನೆ-ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆಯಿದೆ. ವಿನಾಕಾರಣ ರಸ್ತೆಗಿಳಿದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾದರೂ ಭಾನುವಾರ ಮಾಂಸಪ್ರಿಯರು ಮೀನಿಗಾಗಿ ಲಾಕ್​ಡೌನ್ ಆದೇಶ ಉಲ್ಲಂಘಿಸಿದರು. ಆಡಳಿತದ ವತಿಯಿಂದಲೇ ಮನೆ ಬಾಗಿಲಿಗೆ ಮೀನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರೂ ಬೆಳಗ್ಗೆ 7 ಗಂಟೆಗಾಗಲೇ ಹಳೇ ಬಸ್ ನಿಲ್ದಾಣದ ಬಳಿಯ ಮೀನು ಮಾರುಕಟ್ಟೆ ಬಳಿ ನೂರಾರು ಜನರು ಸೇರಿದ್ದರು. ಪೊಲೀಸರು ಬರುತ್ತಿದ್ದಂತೆ ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಯಲ್ಲಿಯೇ ಉಳಿಯುವಂತೆ ಎಚ್ಚರಿಸಿದರು. ಈ ವೇಳೆ ಡಿವೈಎಸ್​ಪಿ ಜಿ.ಟಿ. ನಾಯಕ, ಸಿಪಿಐ ಪ್ರದೀಪ ಬಿ.ಯು. ಮೀನು ಮಾರಾಟಗಾರರರಿಗೆ ಎಚ್ಚರಿಕೆ ನೀಡಿದ್ದಲ್ಲದೇ, ತಕ್ಷಣ ಮಾರುಕಟ್ಟೆಯ ಬಾಗಿಲಿಗೆ ಬೀಗ ಹಾಕಿದರು.

    ಸಾಮಾಜಿಕ ಅಂತರವೇ ಸವಾಲು: ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತಿ ವೃತ್ತದಲ್ಲಿ ಪೊಲೀಸರು ನಿಂತು, ರಸ್ತೆಯಲ್ಲಿ ಹೋಗುವ ಕಾರು, ದ್ವಿಚಕ್ರ ವಾಹನ ಸವಾರರನ್ನು ತಡೆದು ವಿಚಾರಿಸಿದರೂ ಕೆಲವರು ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದು ಕಂಡ ಬಂತು. ಅಲ್ಲಲ್ಲಿ ದಿನಸಿ ಸೇರಿ ಕೆಲ ಅಂಗಡಿಗಳು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. ವಾರ್ಡ್​ಗಳಿಗೆ ಹಣ್ಣು-ತರಕಾರಿ ವಾಹನದಲ್ಲಿ ಬರುತ್ತಿದ್ದು, ದರಪಟ್ಟಿಯಂತೆ ವ್ಯಾಪಾರ ಮಾಡದ ಬಗ್ಗೆ ದೂರುಗಳು ಕೇಳಿ ಬಂದವು. ಕೆಲವೆಡೆ ತರಕಾರಿ, ಹಣ್ಣು, ದಿನಸಿಗಳಿಗೆ ಸಾರ್ವಜನಿಕರು ಮುಗಿ ಬೀಳುತ್ತಿದ್ದು, ಸಾಮಾಜಿಕ ಅಂತರ ಪಾಲನೆ ಸವಾಲಾಗಿ ಮಾರ್ಪಟ್ಟಿದೆ. ಈ ನಡುವೆ ಕೆಲವು ಹೋಟೆಲ್​ಗಳು ಬಾಗಿಲು ತೆರೆದಿದ್ದು, ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಿವೆ.

    ಬಂಧನ: ಇಲ್ಲಿನ ಚಲವಾದಿಗಲ್ಲಿಯಲ್ಲಿ ಅನಾವಶ್ಯವಾಗಿ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಓಡಾಡುತ್ತಿದ್ದ ಪವನಕುಮಾರ ಚಲವಾದಿ ಮತ್ತು ಐದು ರಸ್ತೆ ಹತ್ತಿರ ಸಿಕ್ಕಿದ್ದ ಮೋಟರ್ ಸೈಕಲ್ ಸವಾರ ಕಸ್ತೂರಬಾ ನಗರದ ಪಯಾಜ್ ಅಹ್ಮದ್ ಸಾಬ್ ಎಂಬುವವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಜತೆ ಅವರ ಮೋಟಾರ್ ಸೈಕಲ್ ಜಪ್ತಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ.

    ಔಷಧ, ಆಸ್ಪತ್ರೆಗಾಗಿ ಹಳ್ಳಿಯಿಂದ ಬಂದವರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ. ಆದರೆ, ಅನಗತ್ಯವಾಗಿ ಓಡಾಡುವವರು, ಲಾಕ್ ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ನಿಶ್ಚಿತ. | ಪ್ರದೀಪ ಬಿ.ಯು. ಸಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts