More

    ನಿವೇಶನ ಆಕಾಂಕ್ಷಿಗಳಿಗೆ ವನವಾಸ!

    ಬಸವರಾಜ ಇದ್ಲಿ ಹುಬ್ಬಳ್ಳಿ

    ಸರ್ಕಾರಿ ನಿವೇಶನ ಸಿಗುತ್ತದೆ ಎಂದು ಕಾಯುತ್ತಿರುವ ಅರ್ಜಿದಾರರನ್ನು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು (ಹುಡಾ) ವನವಾಸಕ್ಕೆ ನೂಕಿದೆ. ಆದರೆ, ಈ ವನವಾಸ 14 ವರ್ಷಕ್ಕೆ ಮುಗಿಯುತ್ತದೆ ಎಂಬ ಖಚಿತತೆಯೂ ಇಲ್ಲ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ, ಮುಂಗಡ ಹಣ ಪಾವತಿಸಿ ಹತ್ತಾರು ವರ್ಷಗಳು ಕಳೆದರೂ ಹುಡಾದ ವಿಳಂಬ ನೀತಿಯಿಂದಾಗಿ ಅರ್ಜಿದಾರರು ನಿವೇಶನ ಸಿಗದೆ ಪರದಾಡುವಂತಾಗಿದೆ.

    ಅಮರಗೋಳದ (ಆರ್​ಟಿಒ ಎದುರು) ಚನ್ನಮ್ಮನಗರ ಲೇಔಟ್​ನಲ್ಲಿ ನಿವೇಶನಕ್ಕಾಗಿ 2007ರಲ್ಲಿಯೇ ಅರ್ಜಿ ಸಲ್ಲಿಸಲಾಗಿದ್ದು, ಬರುವ ಆಗಸ್ಟ್ ತಿಂಗಳಿಗೆ 14 ವರ್ಷವಾಗುತ್ತದೆ. ಲಕಮನಹಳ್ಳಿ ಹಾಗೂ ತಡಸಿನಕೊಪ್ಪ ಲೇಔಟ್​ಗಳಲ್ಲಿ ಬಾಕಿ ಉಳಿದ ನಿವೇಶನಗಳನ್ನು ಹಂಚಲು 2012ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

    ಅವಳಿನಗರದ ಆಸರೆ ಇಲ್ಲದ ಜನರಿಗೆ ಯೋಗ್ಯ ಬೆಲೆಯಲ್ಲಿ ಸೂರು ಕಲ್ಪಿಸುವ ಪ್ರಮುಖ ಉದ್ದೇಶದಿಂದ ಜನ್ಮ ತಾಳಿದ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಕೆಲ ವರ್ಷಗಳಿಂದ ಹೊಸ ವಸತಿ ವಿನ್ಯಾಸಗಳನ್ನು ರೂಪಿಸಿಲ್ಲ. ಈಗಾಗಲೇ ಅಭಿವೃದ್ಧಿಪಡಿಸಿದ ಲೇಔಟ್​ಗಳಲ್ಲಿನ ಬಾಕಿ ನಿವೇಶನಗಳನ್ನೂ ಹಂಚಿಕೆ ಮಾಡಿಲ್ಲ.

    ಇದರಿಂದ ಸಾವಿರಾರು ಜನರು ಸ್ವಂತ ಸೂರು ಇಲ್ಲದೇ ಪರದಾಡುವಂತಾಗಿದೆ. ಬಾಡಿಗೆ ಮನೆಯಲ್ಲೇ ಜೀವನ ಕಳೆಯುವ ಪ್ರಸಂಗ ಬಂದಿದೆ. ಸ್ವಂತದ್ದೊಂದು ಮನೆ ಕಟ್ಟಿಸಬೇಕೆಂದು ಆಸೆ ಪಟ್ಟು ಸರ್ಕಾರದ ಅಂಗ ಸಂಸ್ಥೆ ಹುಡಾಕ್ಕೆ ಹೇಗೋ ಹಣ ಹೊಂದಿಸಿಕೊಂಡು ಅರ್ಜಿ ಹಾಕಿದ್ದಾರೆ. ಆದರೆ, ಅರ್ಜಿ ಸಲ್ಲಿಸಿ ದಶಕ ಕಳೆದರೂ ಆಕಾಂಕ್ಷಿಗಳಿಗೆ ಕೇವಲ ಭರವಸೆ ಸಿಗುತ್ತಿದೆ.

    ಹುಸಿಯಾದ ಅಧ್ಯಕ್ಷರ ಭರವಸೆ: ಹುಡಾ ಅಧ್ಯಕ್ಷರಾಗಿ ಬಂದ ಕೂಡಲೆ ಬಹುತೇಕರು ಹೇಳುವಂತೆ ನಾಗೇಶ ಕಲಬುರ್ಗಿ ಅವರು ಸಹ ಅರ್ಹರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಹುಡಾ ಅಧ್ಯಕ್ಷರಾಗಿ ವರ್ಷ ಕಳೆದರೂ (2020ರ ಫೆಬ್ರವರಿಯಲ್ಲಿ ಅಧಿಕಾರ ಸ್ವೀಕಾರ) ಬಾಕಿ ಉಳಿದ ನಿವೇಶನ ಹಂಚಿಕೆ ಕಾರ್ಯ ಆಗಿಲ್ಲ. ಹಂಚಿಕೆಗೆ ಇರುವ ಎಲ್ಲ ಅಡೆತಡೆ ನಿವಾರಣೆ ಮಾಡಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಇಂಗಿತ ವ್ಯಕ್ತಪಡಿಸಿದ್ದರು. ಅದು ಆಗದೇ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.

    ವಿಳಂಬ ಏಕೆ?: ಧಾರವಾಡದ ಲಕಮನಹಳ್ಳಿ ಹಾಗೂ ತಡಸಿನಕೊಪ್ಪದಲ್ಲಿ ಲೇಔಟ್ ಅಭಿವೃದ್ಧಿಪಡಿಸಿ ಏಳೆಂಟು ವರ್ಷಗಳೇ ಕಳೆದಿವೆ. ಆದರೆ, ಹುಡಾ ಅಧಿಕಾರಿಗಳಿಗೆ ಕೆಜೆಪಿ (ಕಮ್ ಜಾಸ್ತ್ ಪತ್ರ) ಮಾಡಿಸುವುದು ಇದೀಗ ನೆನಪಾಗಿದೆ. ಸರ್ವೆ ಇಲಾಖೆಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದ್ದರಿಂದ ಕೆಜೆಪಿ ಸರ್ವೆ ಕೂಡ ನಿಧಾನ ಗತಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಜೆಪಿ ಮಾಡಿಸದೇ ಇದ್ದರೆ ನಿವೇಶನಗಳ ಅಳತೆಯಲ್ಲಿ ವ್ಯತ್ಯಾಸ ಬರುತ್ತದೆ. ಆಗ ಕೊಳ್ಳುವವರಿಗೆ ತೊಂದರೆಯಾಗುತ್ತದೆ. ಹಾಗಾಗಿ ಈ ಕಾರ್ಯ ಮುಗಿದ ನಂತರವೇ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹುಡಾ ಆಯುಕ್ತ ಎನ್.ಎಚ್. ಕುಮ್ಮಣ್ಣವರ ತಿಳಿಸಿದ್ದಾರೆ.

    ಸೂರಿಲ್ಲದ ಜನರಿಗಾಗಿ ಹುಡಾದಿಂದ ಹೊಸ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಕೆಲ ಲೇಔಟ್​ಗಳಲ್ಲಿ ಬಾಕಿ ಇರುವ ನಿವೇಶನಗಳ ಹಂಚಿಕೆಗೂ ಮುತುವರ್ಜಿ ವಹಿಸಲಾಗುವುದು.
    | ಜಗದೀಶ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts