More

    ನಿರ್ಗತಿಕರ ನೆರವಿಗೆ ಬರುತ್ತಿಲ್ಲ ತೆರಿಗೆ ಹಣ

    ರಾಜೇಂದ್ರ ಶಿಂಗನಮನೆ ಶಿರಸಿ

    ಭಿಕ್ಷಾಟನೆ ನಿಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳು ಹಾಗೂ ಪ್ರಾಧಿಕಾರಗಳ ಮೂಲಕ ಕೇಂದ್ರ ಪರಿಹಾರ ಸಮಿತಿಯು ಕೋಟ್ಯಂತರ ರೂಪಾಯಿ ಸಂಗ್ರಹಿಸಿದರೂ ಜಿಲ್ಲೆಯಲ್ಲಿ ಮಾತ್ರ ಭಿಕ್ಷುಕರು ಇಂದಿಗೂ ನೆಲೆಯಿಲ್ಲದೆ ರಸ್ತೆ ಬದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತಕ್ಷಣ ಪುನರ್ವಸತಿ ಕೇಂದ್ರ ತೆರೆದು ಭಿಕ್ಷುಕರ ಶ್ರೇಯೋಭಿವೃದ್ಧಿಗೆ ಈ ಹಣ ವಿನಿಯೋಗಿಸಬೇಕು ಎಂಬ ಒತ್ತಾಸೆ ಕೇಳಿಬಂದಿದೆ.

    ಜಿಲ್ಲೆಯ ಎಲ್ಲ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ಹಾಗೂ ಇನ್ನಿತರ ಅಭಿವೃದ್ಧಿ ಪ್ರಾಧಿಕಾರಗಳು ವಾರ್ಷಿಕವಾಗಿ 50 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಕರವನ್ನು ಸಮಾಜ ಕಲ್ಯಾಣ ಇಲಾಖೆ ಅಧೀನದ ಕೇಂದ್ರ ಪರಿಹಾರ ಸಮಿತಿಗೆ ಭರಣ ಮಾಡುತ್ತಾರೆ. ತಮ್ಮ ವ್ಯಾಪ್ತಿಯಲ್ಲಿ ವಸೂಲಿ ಮಾಡಿದ ಆಸ್ತಿ ಹಾಗೂ ಕಟ್ಟಡ ತೆರಿಗೆಯಲ್ಲಿ ಶೇ. 3ರಷ್ಟು ಭಿಕ್ಷುಕರ ಕರವನ್ನು ತುಂಬುತ್ತಿದ್ದಾರೆ. ದಶಕಗಳಿಂದಲೂ ಬಹುತೇಕ ಎಲ್ಲ ಸಂಸ್ಥೆಗಳು ಈ ಕರವನ್ನು ಕಡ್ಡಾಯವಾಗಿ ತುಂಬುತ್ತಿವೆ. ಆದರೆ, ಯಾವ ಉದ್ದೇಶಕ್ಕೆ ಈ ಕರ ಸಂಗ್ರಹಣೆಯಾಗುತ್ತದೆ ಆ ಉದ್ದೇಶ ಜಿಲ್ಲೆಯಲ್ಲಿ ಪೂರ್ಣಗೊಂಡಿಲ್ಲ. ಇಂದಿಗೂ ಬಹುತೇಕ ಭಿಕ್ಷುಕರು ಪುನರ್ವಸತಿ, ಒಪ್ಪತ್ತಿನ ಊಟವೂ ಇಲ್ಲದೆ ಸ್ವಂತ ನೆಲೆಯೂ ಇಲ್ಲದೆ ಅತಂತ್ರರಾಗಿದ್ದಾರೆ.

    300ರಷ್ಟು ಭಿಕ್ಷುಕರು: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕರೊನಾ ನಡುವೆಯೂ ಭಿಕ್ಷಾಟನೆ ಎಗ್ಗಿಲ್ಲದೆ ಸಾಗಿದೆ. ಅಂದಾಜು 300ರಷ್ಟು ವೃತ್ತಿಪರ ಭಿಕ್ಷುಕರು ನಿತ್ಯವೂ ತುತ್ತಿನ ಚೀಲ ತುಂಬಿಕೊಳ್ಳಲು ಭಿಕ್ಷಾಟನೆ ಮುಂದುವರಿಸಿದ್ದಾರೆ. ಇವರಲ್ಲಿ ಬಹುತೇಕರು ಮಹಿಳೆಯರು ಹಾಗೂ ವೃದ್ಧಾಪ್ಯದ ಅಂಚಿನಲ್ಲಿ ಇರುವವರಾಗಿದ್ದಾರೆ. ಜಿಲ್ಲೆಯಿಂದ ಪ್ರತಿ ವರ್ಷ 50 ಲಕ್ಷ ರೂ. ಕರ ಸಂಗ್ರಹವಾದರೂ ಬೀದಿಯಲ್ಲಿನ ಇಂತಹ ಭಿಕ್ಷುಕರ ಪರಿಸ್ಥಿತಿ ಸುಧಾರಿಸಿಲ್ಲ. ಶಿರಸಿಯ ಗಣೇಶನಗರ ಪ್ರದೇಶದಲ್ಲಿ ಭಿಕ್ಷುಕರು ಸಾಕಷ್ಟಿದ್ದು, ಎರಡೊತ್ತಿನ ಊಟ ಹಾಗೂ ಸ್ವಂತ ಸೂರಿಗಾಗಿ ಇಂದಿಗೂ ಪರದಾಡುತ್ತಿದ್ದಾರೆ.

    ಅಲ್ಲೂ ಇಲ್ಲ, ಇಲ್ಲೂ ಇಲ್ಲ: ಕೋವಿಡ್ 19 ಕಾರಣದಿಂದ ಮಾಡಿದ ಲಾಕ್​ಡೌನ್ ನಂತರ ಜಿಲ್ಲೆಯಲ್ಲಿ ಭಿಕ್ಷುಕರು ಹಾಗೂ ನಿರ್ಗತಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮನೆಮಠ ಇಲ್ಲದೆ ಹಲವು ಭಿಕ್ಷುಕರು ಇಂದಿಗೂ ರಸ್ತೆ, ಫುಟ್​ಪಾತ್, ಬಸ್ ನಿಲ್ದಾಣ, ಆಸ್ಪತ್ರೆ, ಪಾರ್ಕ್​ಗಳಲ್ಲಿ ಮಲಗುತ್ತಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಭಿಕ್ಷುಕರಿಗೆ ಶಿರಸಿ ನಗರಸಭೆ ವತಿಯಿಂದ ಊಟ ನೀಡಿದ್ದು ಹೊರತುಪಡಿಸಿ ಉಳಿದೆಡೆ ಕರೊನಾ ಭೀತಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಂತರ ಕಾಯ್ದುಕೊಂಡಿದ್ದಾರೆ. ಪರಿಣಾಮ ಹೊರ ಜಿಲ್ಲೆಗಳಲ್ಲಿರುವ ಪುನರ್ವಸತಿ ಕೇಂದ್ರಕ್ಕೂ ಹೋಗಲಾಗದೆ, ಸ್ಥಳೀಯವಾಗಿ ಆಸರೆಯೂ ಇಲ್ಲದೆ ಬೀದಿಯಲ್ಲೇ ಉಳಿಯುವಂತಾಗಿದೆ.

    ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ನಿರಾಶ್ರಿತರ ಪರಿಹಾರ ಕೇಂದ್ರ ಬೆಳಗಾವಿಯಲ್ಲಿದೆ. ಅಲ್ಲಿನ ಅಧಿಕಾರಿಗೆ ನೇರವಾಗಿ ದಾಳಿ ಮಾಡಿ ಭಿಕ್ಷುಕರನ್ನು ಕರೆದೊಯ್ಯುವ ಅಧಿಕಾರವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಿರಾಶ್ರಿತರ ಪರಿಹಾರ ಕೇಂದ್ರ ತೆರೆಯಲು ಸರ್ಕಾರಕ್ಕೆ ಈ ಹಿಂದೆ ವಿನಂತಿಸಲಾಗಿತ್ತು. ಕಾರವಾರದ ಮಾಜಾಳಿ ಬಳಿ ಜಾಗ ಗುರುತಿಸಲಾಗಿತ್ತು. ಆದರೆ, ಸರ್ಕಾರದ ಮಟ್ಟದಲ್ಲಿ ತೀರ್ವನವಾಗಬೇಕಿದೆ. ಜಿಲ್ಲೆಯ ಭಿಕ್ಷುಕರನ್ನು ಕರೆದೊಯ್ಯುವಂತೆ ನಾವು ಹಲವು ಬಾರಿ ಮನವಿ ಮಾಡಿದ್ದೇವೆ. | ಪುರುಷೋತ್ತಮ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

    ಅನಿವಾರ್ಯತೆಯಿದೆ ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡುತ್ತಿದ್ದು, ನಿತ್ಯದ ಊಟಕ್ಕೆ ಬೇಕಾದ ಹಣ ಸಿಗುತ್ತಿದೆ. ಹಲವರು ವಯಸ್ಸಾದರೂ ಅನಿವಾರ್ಯವಾಗಿ ಭಿಕ್ಷಾಟನೆಗೆ ಹೊಂದಿಕೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಭಿಕ್ಷಾಟನೆ ನಿಮೂಲನೆ ಮಾಡುವುದಾಗಿ ಹೇಳುತ್ತ ಹಣ ಸಂಗ್ರಹಿಸುತ್ತಿವೆ. ನಾವು ಮಾತ್ರ ನಿತ್ಯವೂ ಭಿಕ್ಷೆ ಬೇಡುತ್ತಲೇ ಇದ್ದೇವೆ ಎಂದು ಜಯಲಕ್ಷ್ಮಿ ಭೋವಿವಡ್ಡರ್ ಹಾಗೂ ಇತರ ಸಂತ್ರಸ್ತರು ಅಸಹಾಯಕವಾಗಿ ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts