More

    ನಿಪ್ಪಾಣಿ ನಗರದಲ್ಲಿ ಇನ್ನೆರಡು ಆಸ್ಪತ್ರೆ ಸ್ಥಾಪನೆ ಶೀಘ್ರ

    ನಿಪ್ಪಾಣಿ: ನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಎಲ್ಲರಿಗೂ ಸಾಕಾಗುತ್ತಿಲ್ಲ. ಅದಕ್ಕಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಒಂದು ಆಸ್ಪತ್ರೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ಅದಲ್ಲದೆ ಇನ್ನೆರಡು ಆಸ್ಪತ್ರೆ ಶೀಘ್ರ ಸ್ಥಾಪಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಬಸವಪ್ರಸಾದ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರದ ಮಧ್ಯ ಭಾಗದಲ್ಲಿರುವ ಮತ್ತು ಬಡವರ ಪಾಲಿಗೆ ಉಚಿತ ಸೇವೆ ಸಲ್ಲಿಸುವ ಸರಳಾಬಾಯಿ ಹೆರಿಗೆ ಆಸ್ಪತ್ರೆ ಅದೆಷ್ಟೋ ವರ್ಷ ಬಂದ್ ಆಗಿತ್ತು. ಅದನ್ನು ಮನಗಂಡು ನಾಲ್ಕು ತಿಂಗಳ ಹಿಂದೆ ಅದನ್ನು ಪುನರಾರಂಭಿಸಿದ್ದೇನೆ. ಇಲ್ಲಿಯವರೆಗೆ ಸುಮಾರು 25ಕ್ಕೂ ಹೆಚ್ಚು ಹೆರಿಗೆಗಳು ಉಚಿತವಾಗಿ ನಡೆದಿವೆ. ಕೋವಿಡ್-19ರ ಅವಧಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಡಿಯಲ್ಲಿ ಆರಂಭಿಸಿದ ಕೋವಿಡ್ ಕೇರ್ ಸೆಂಟರ್‌ನಿಂದ ಸುಮಾರು 2,000 ರೋಗಿಗಳು ಖರ್ಚಿಲ್ಲದೆ ಗುಣಮುಖರಾಗಿದ್ದಾರೆ ಎಂದರು.

    ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ 15 ಯೋಜನೆಗಳನ್ನು ಸೆ.15ರ ಒಳಗೆ ಅನುಷ್ಠಾನಗೊಳಿಸಲಾಗುವುದು. ಮಹಿಳೆಯರು ಮುಂದೆ ಬಂದು ಸಂಪರ್ಕಿಸಿ. ಕಾರ್ಯಕರ್ತರೇ ನಮಗೆ ದೇವರು (ಗಾಡ್‌ಫಾದರ್) ಇದ್ದಹಾಗೆ. ಕಾರ್ಯಕರ್ತರ ಪರಿಶ್ರಮದ ಫಲವಾಗಿ ನಾನು ಎರಡು ಬಾರಿ ಶಾಸಕಿಯಾಗಿ ಆಯ್ಕೆಗೊಂಡಿದ್ದೇನೆ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ತಾಲೂಕಿನ ಚಿತ್ರಣ ಬದಲಾಗಲಿದೆ. ವ್ಯಾಪಾರ, ಆರೋಗ್ಯ, ಪ್ರವಾಸೋದ್ಯಮ, ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ನಗರ ಪ್ರಖ್ಯಾತಗೊಳ್ಳಲಿದೆ. ಅಂತಹ ಯೋಜನೆ ರೂಪಿಸಲಾಗಿದೆ. ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದರು.

    ಬಸವಪ್ರಸಾದ ಜೊಲ್ಲೆ ಮಾತನಾಡಿ, ಎಲ್ಲರಿಗೂ ಹಣ, ಒಡವೆ, ಜಮೀನು, ವಾಹನ ಆಸ್ತಿಯಾಗಿದ್ದರೆ ಜೊಲ್ಲೆ ಪರಿವಾರಕ್ಕೆ ಕಾರ್ಯಕರ್ತರು ಸಂಪತ್ತಾಗಿದ್ದಾರೆ. ಯುವಜನರ ಪ್ರತಿಭೆ ಅನಾವರಣಗೊಳ್ಳಲು ಬಸವಜ್ಯೋತಿ ಯೂಥ್ ಫೌಂಡೇಷನ್ ವೇದಿಕೆಯಾಗಿದೆ. ಯುವವರ್ಗದ ಆರೋಗ್ಯದ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಜಿಮ್ ಸ್ಥಾಪಿಸಲಾಗುವುದು ಎಂದರು.

    ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಉದ್ಯಮಿ ರಿಷಭ್ ಜೈನ್, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಎಸ್.ಎಸ್.ಢವಣೆ, ಆನಂದಾ ಯಾದವ ಮಾತನಾಡಿದರು. ತಹಸೀಲ್ದಾರ್ ಪ್ರವೀಣ ಕಾರಂಡೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಹಾಲಶುಗರ್ ವೈಸ್ ಚೇರ್ಮನ್ ಮಲಗೊಂಡ ಪಾಟೀಲ, ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ನಗರ ಯೋಜನಾ ಪ್ರಾಧಿಕಾರದ ಚೇರ್ಮನ್ ಅಭಯ ಮಾನವಿ ಇದ್ದರು. ರಮೇಶ ಪಾಟೀಲ ಮತ್ತು ವಿಜಯ ರಾವುತ ನಿರೂಪಿಸಿದರು.

    ಕ್ರೇನ್ ಮೂಲಕ ಪುಷ್ಪ ಹಾರ

    ಜೊಲ್ಲೆ ಕುಟುಂಬ ನಿಪ್ಪಾಣಿಗೆ ಆಗಮಿಸುತ್ತಿದ್ದಂತೆ ಜನ್ಮದಿನದ ಅಂಗವಾಗಿ ಕಾರ್ಯಕರ್ತರು ಬಸವಪ್ರಸಾದ ಜೊಲ್ಲೆ ಅವರಿಗೆ ಕ್ರೇನ್ ಮೂಲಕ ಬೃಹತ್ ಪುಷ್ಪ ಹಾರ ಹಾಕಿ ಶುಭಾಶಯ ಕೋರಿದರು. ಗಣ್ಯರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಶುಭಾಶಯ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts