More

    ನಿಧಾನಗತಿಯಲ್ಲಿದೆ ಲಸಿಕೆ ಕಾರ್ಯ

    ವಿಜಯವಾಣಿ ವಿಶೇಷ ಗದಗ

    ಭಾರಿ ನಿರೀಕ್ಷೆಯೊಂದಿಗೆ ಆರಂಭವಾಗಿದ್ದ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಸಾಗಿದೆ. ಕರೊನಾ ಸೇನಾನಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದರಿಂದ ನಿಗದಿತ ಗುರಿ ಮುಟ್ಟಲು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ.

    ಜ. 16ರಿಂದ ಸರ್ಕಾರ ಕೋವಿಡ್-19 ಲಸಿಕೆ ಹಾಕಲು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 9 ಸಾವಿರ ಕರೊನಾ ಸೇನಾನಿಗಳಿದ್ದು, ಈವರೆಗೆ 2700 ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಲಸಿಕೆ ಹಾಕಿರುವ ಜಿಲ್ಲೆಗಳ ರ್ಯಾಂಕಿಂಗ್​ನಲ್ಲಿ ಗದಗ ಜಿಲ್ಲೆ 16ನೇ ಸ್ಥಾನದಲ್ಲಿದೆ.

    ಲಸಿಕೆ ಹಾಕಿಸಿಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಹೇಳಿದರೂ ಸೇನಾನಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕರೊನಾ ರೋಗದ ಲಕ್ಷಣಗಳು ಇಲ್ಲ. ಹೀಗಾಗಿ ಲಸಿಕೆ ಏತಕ್ಕಾಗಿ ಹಾಕಿಸಿಕೊಳ್ಳಬೇಕು ಎಂದು ಅನೇಕರು ಪ್ರಶ್ನಿಸುತ್ತಾರೆ. ಕರೊನಾ ವಾರಿಯರ್ಸ್​ಗೆ ಮನಸ್ಸಿದ್ದರೂ ಅವರ ಕುಟುಂಬ ಸದಸ್ಯರು ಲಸಿಕೆ ಹಾಕಿಸಿಕೊಳ್ಳಲು ವಿರೋಧಿಸುತ್ತಿದ್ದಾರೆ. ಲಸಿಕೆ ಕುರಿತು ಅಲ್ಲಲ್ಲಿ ಎದ್ದಿರುವ ಕೆಲ ಅಪಪ್ರಚಾರಗಳು ಸಹ ಲಸಿಕೆ ಹಾಕುವ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ.

    ಜಿಲ್ಲೆಯಲ್ಲಿ ಜ. 16ರಿಂದ ಆರಂಭವಾದ ಲಸಿಕೆ ಹಾಕುವ ಕಾರ್ಯ ಜ.20ರೊಳಗಾಗಿ ಮುಗಿಯಬೇಕಿತ್ತು. ಮೊದಲ ಎರಡು ದಿನ ಜನರ ಸಂಖ್ಯೆ ಉತ್ತಮವಾಗಿತ್ತು. ನಂತರ ಕಡಿಮೆಯಾಗುತ್ತ ಬಂತು. ವಾರದಿಂದ ಲಸಿಕೆ ಹಾಕಿಸಿಕೊಳ್ಳಲು ಯಾರೂ ಬರುತ್ತಿಲ್ಲ ಎಂದು ಲಸಿಕೆ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ.

    ಜಿಲ್ಲೆಗೆ ಒಟ್ಟು 5500 ಲಸಿಕೆಗಳನ್ನು ತರಿಸಲಾಗಿದ್ದು, ಬೇಡಿಕೆ ಮೇರೆಗೆ ನಿಗದಿತ ಸ್ಥಳಗಳಿಗೆ ಕಳಿಸಲಾಗಿದೆ. ಲಸಿಕೆ ದಾಸ್ತಾನಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಫಲಾನುಭವಿಗಳೇ ಬರುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ತಾಂತ್ರಿಕ ದೋಷ ಅಡ್ಡಿ: ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವವರು ತಮ್ಮ ಹೆಸರನ್ನು ಕೋವಿನ್ ಆಪ್​ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಆಧಾರ್ ಸಂಖ್ಯೆ ಹಾಕಿ ದೃಢೀಕರಿಸಿಕೊಳ್ಳಬೇಕು. ನಂತರ ಲಸಿಕೆ ಹಾಕುವ ಸಮಯವನ್ನು ಕೋವಿನ್ ಆಪ್ ಹಂಚಿಕೆ ಮಾಡುತ್ತದೆ. ಈ ಎಲ್ಲ ಪ್ರಕ್ರಿಯೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಜಿಲ್ಲೆಯ ಕರೊನಾ ಸೇನಾನಿಗಳ ಹೆಸರನ್ನು ಈ ಆಪ್​ನಲ್ಲಿ ನೋಂದಣಿ ಮಾಡಲಾಗಿದೆ. ಆದರೆ, ಆಪ್​ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಹೊಸಬರ ಹೆಸರು ನೋಂದಣಿ ಆಗುತ್ತಿಲ್ಲ.

    ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಈ ಕುರಿತು ಸಾಕಷ್ಟು ಪ್ರಚಾರ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಲ್ಲ. ಕರೊನಾ ನಿಮೂಲನೆಗಾಗಿ ಕೆಲಸ ಮಾಡಿದವರು ಲಸಿಕೆ ಹಾಕಿಸಿಕೊಂಡು ಇತರರಿಗೂ ಮಾದರಿಯಾಗಬೇಕು. | ಡಾ. ಆರ್.ಎಂ. ಗೊಜನೂರ ಆರೋಗ್ಯಾಧಿಕಾರಿ ಹಾಗೂ ಕೋವಿಡ್ ಲಸಿಕೆ ಅಭಿಯಾನದ ಮುಖ್ಯಸ್ಥ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts