More

    ನಿಗದಿತ ಸ್ಥಳದಲ್ಲಿ ವಾರದ ಸಂತೆ ನಡೆಯಲಿ

    ಬಂಕಾಪುರ: ಪಟ್ಟಣದ ಮಂಗಳವಾರದ ಸಂತೆಯನ್ನು ಈ ಹಿಂದಿನಂತೆ ನಿಗದಿಪಡಿಸಿದ ಸ್ಥಳದಲ್ಲಿ ನಡೆಸುವಂತೆ ಪಟ್ಟಣದ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ವತಿಯಿಂದ ಪುರಸಭೆ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದ ಪಟ್ಟಣದ ವಾರದ ಸಂತೆ ಮತ್ತೆ ಆರಂಭಗೊಂಡಿದೆ. ಆದರೆ, ನಿಗದಿಪಡಿಸಿದ ಸ್ಥಳದಲ್ಲಿ ಸಂತೆ ನಡೆಯದೇ ಎಲ್ಲೆಂದರಲ್ಲಿ ಅಂಗಡಿ ಹಚ್ಚುತ್ತಿರುವುದರಿಂದ ವಾರದ ಸಂತೆಗೆ ಬರುವ ಗ್ರಾಮೀಣ ಭಾಗದ ಜನರಿಗೆ ಹಾಗೂ ಪಟ್ಟಣದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮೀನು, ಮಾಂಸದ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಮಾರಾಟ ಮಾಡಲಾಗುತ್ತಿದೆ. ಕೊಳಚೆ, ದುರ್ವಾಸನೆ ಮಧ್ಯೆ ಮೂಗು ಮುಚ್ಚಿಕೊಂಡು ತರಕಾರಿ ಕೊಳ್ಳುವಂತಾಗಿದೆ. ಸ್ಥಳದಲ್ಲಿ ಪುರಸಭೆ ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸಿಲ್ಲ ಎಂದು ದೂರಿದ್ದಾರೆ.

    ಕೆಲ ತಿಂಗಳುಗಳಿಂದ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದೆ. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಆಂಬುಲೆನ್ಸ್​ಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪುರಸಭೆಯವರು ವಾರದ ಸಂತೆಯನ್ನು ನಿಗದಿತ ಸ್ಥಳದಲ್ಲಿಯೇ ನಡೆಸಬೇಕು. ಸಂತೆಯ ವ್ಯಾಪಾರಸ್ಥರಿಗೆ ಅಗತ್ಯ ಮೂಲಸೌಲಭ್ಯದ ಜತೆಗೆ ಸಿಬ್ಬಂದಿ ನೇಮಿಸಿ ಸ್ಥಳ ನಿಗದಿಪಡಿಸಬೇಕು. ಸಮುದಾಯ ಆರೋಗ್ಯ ಕೇಂದ್ರದಿಂದ 500 ಮೀ. ಅಂತರವನ್ನು ವಾರದ ಸಂತೆಯ ದಿನದಂದು ನಿರ್ಬಂಧಿತ ಪ್ರದೇಶ ಎಂದು ಘೊಷಣೆ ಮಾಡಬೇಕು. ಖಾಸಗಿ ಒಡೆತನದ ಖಾಲಿ ಜಾಗದಲ್ಲಿ ನಡೆಯುವ ಸಂತೆಯನ್ನು ನಿರ್ಬಂಧಿಸಿ, ನಿಗದಿತ ಪಟ್ಟಣದ ಮಧ್ಯ ಭಾಗದಲ್ಲಿ ಸಂತೆ ನಡೆಸಬೇಕು. ಪಟ್ಟಣದ ವ್ಯಾಪಾರಸ್ಥರು ಮಂಗಳವಾರದ ಸಂತೆಯನ್ನು ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲಿ ನಡೆಸಲು ತೀರ್ವನಿಸಿದ್ದು, ಪುರಸಭೆ ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

    ಮನವಿ ಸ್ವೀಕರಿಸಿದ ಪುರಸಭೆ ಅಧಿಕಾರಿಗಳಾದ ಬೀರಪ್ಪ ಗಿಡ್ಡಣ್ಣವರ, ರೂಪಾ ನಾಯ್ಕ, ಸಂತೆ ವಿಷಯದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

    ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಮಂಜು ಕೂಲಿ, ಜೆ.ಕೆ. ಶೆಟ್ಟರ್, ಮೋಹನ ಮಂಗಳಾರತಿ, ರಾಮಕೃಷ್ಣ ಆಲದಕಟ್ಟಿ, ಮಂಜುನಾಥ ಗುಡಿಮನಿ, ಪ್ರಲ್ಹಾದ ರಾಯ್ಕರ, ಅಶೋಕ ಗುಡಿಮನಿ, ಅಶೋಕ ಓತಗೇರಿ, ಮಾಲತೇಶ ತಳ್ಳಳ್ಳಿ, ಮುಖೇಶ ಜೈನ್, ನಿಂಗಪ್ಪ ದೊಡಮನಿ, ರಾಮಣ್ಣ ಸತ್ಯಪ್ಪನವರ, ಪುಂಡಲೀಕ ಪೂಕಾಳೆ, ರಮೇಶ ನರೆಗಲ್ಲ, ಕಿರಣ ಜೈನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts