More

    ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

    ಪಾಂಡವಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಸಬಲೀಕರಣದ ವಿಚಾರವಾಗಿ ಜ.16 ರಂದು ಆಯೋಜಿಸಿರುವ ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದು, ಮಹಿಳೆಯರಿಂದ ಸಲಹೆ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ತಿಳಿಸಿದರು.


    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ನಾ ನಾಯಕಿ ಕಾರ್ಯಕ್ರಮಕ್ಕೆ ನಾಯಕತ್ವದ ಗುಣವಿರುವ ಮಹಿಳೆಯರು ಅಂದರೆ ಗ್ರಾಪಂ, ಜಿಪಂ, ತಾಪಂ, ಟೌನ್ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮಹಿಳಾ ಸದಸ್ಯರು ಭಾಗವಹಿಸಬೇಕಿದೆ. ಈ ಸಭೆಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಆದ್ಯತೆ ನೀಡಲು ಯಾವ್ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಮಹಿಳೆಯರು ಮುಕ್ತವಾಗಿ ತಿಳಿಸಬಹುದು ಅಥವಾ ತಮ್ಮ ಅನಿಸಿಕೆಗಳನ್ನು ಬರೆದು ಸಲಹಾ ಪೆಟ್ಟಿಗೆಯಲ್ಲಿ ಹಾಕಿದರೆ ಅದರಲ್ಲಿ ಗಂಭೀರವಾದ ಸಲಹೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.


    ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 2 ಸಾವಿರ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಹಿಳೆಯರಿಗೆ ಬಸ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.


    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಪ್ರಿಯಾಂಕಾ ಗಾಂಧಿ ಅವರ ಸಂದೇಶಗಳನ್ನು ಮಹಿಳೆಯರು ತಿಳಿದುಕೊಳ್ಳಬಹುದು. ಕಾಂಗ್ರೆಸ್ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಲು ಬದ್ಧವಾಗಿದೆ ಎಂದು ಹೇಳಿದರು.


    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾಗೇಪುರ ಆನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್. ರಮೇಶ್, ಮುಖಂಡರಾದ ಚಿಕ್ಕಾಡೆ ಶ್ರೀಕಾಂತ್, ಸಿ.ಎಂ. ಮಹೇಶ್, ಗಾಣದಾಳು ವಿಜಯಕುಮಾರ್, ತಮ್ಮೇಗೌಡ, ಚಿಕ್ಕಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts