More

    ಪಾಂಡವಪುರ ಪುರಸಭೆ ಸ್ಥಿರಾಸ್ತಿ ಜಪ್ತಿ

    ಪಾಂಡವಪುರ: ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಅಮೀನರು ಪುರಸಭೆ ಸ್ಥಿರಾಸ್ತಿ ಜಪ್ತಿ ಮಾಡಿದರು.

    ಪಟ್ಟಣದ ಹೊರವಲಯದಲ್ಲಿ ಯುಜಿಡಿ ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ 2009ರಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಶೇಷ ಭೂ ಸ್ವಾಧಿನಾಕಾರಿ ಮೂಲಕ ರೈತರ 5.20 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರದ ಮೊತ್ತ ನಿಗದಿ ಪಡಿಸಿತ್ತು. ರೈತರು ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದರು. ವಿಚಾರಣೆ ಬಳಿಕ ನ್ಯಾಯಾಲಯ ರೈತರ ಮನವಿ ಪುರಸ್ಕರಿಸಿ ಹೆಚ್ಚಿನ ಪರಿಹಾರ ನೀಡುವಂತೆ ಆದೇಶ ನೀಡಿತು. ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತ ನ್ಯಾಯಾಲಯದಿಂದ ಜಪ್ತಿ ಆದೇಶ ಪಡೆದು ಗುರುವಾರ ಪುರಸಭೆಯ ಕುರ್ಚಿ, ಟೇಬಲ್, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.

    ರೈತ ಪರ ವಕೀಲ ನಿರಂಜನ್ ಮಾತನಾಡಿ, ನಮ್ಮ ಕಕ್ಷಿದಾರರಾದ ಜಯಮ್ಮ ಎಂಬುವವರಿಗೆ ಸೇರಿದ 14 ಗುಂಟೆ ಜಮೀನಿಗೆ ನ್ಯಾಯಾಲಯದ ಆದೇಶದಂತೆ 2.28 ಕೋಟಿ ರೂ. ಪರಿಹಾರದ ಮೊತ್ತ ಪಾವತಿಸಬೇಕಿತ್ತು. ಈ ಪೈಕಿ 1.3 ಕೋಟಿ ರೂ. ಪರಿಹಾರದ ಮೊತ್ತ ಪಾವತಿಯಾಗಿದ್ದು, ಉಳಿಕೆ ಪರಿಹಾರದ ಹಣ ಸಂದಾಯಕ್ಕಾಗಿ ಅಧಿಕಾರಿಗಳು ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸುವುದು ಸೇರಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೋರೆ ಹೋಗಿ ಜಪ್ತಿ ಆದೇಶ ಪಡೆದುಕೊಂಡು ಜಪ್ತಿಗೆ ಮುಂದಾಗಿದ್ದೇವೆ. ಹೈಕೋರ್ಟ್ ಕೂಡ ಏ.26ರೊಳಗೆ ಪರಿಹಾರದ ಮೊತ್ತ ಪಾವತಿಸುವಂತೆ ಆದೇಶ ನೀಡಿದೆ. ಆದರೆ ಅಧಿಕಾರಿಗಳು ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

    ಪುರಸಭೆ ಮುಖ್ಯಾಧಿಕಾರಿ ವೀಣಾ ಮಾತನಾಡಿ, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಮೀನು ನೀಡಿರುವ 13 ರೈತರ ಪೈಕಿ 8 ರೈತರೊಂದಿಗೆ ಉಪವಿಭಾಗಾಧಿಕಾರಿಗಳು ಮಾತುಕತೆ ನಡೆಸಿ ಪರಿಹಾರ ಮೊತ್ತ ನೀಡಿದ್ದಾರೆ. ಇನ್ನೂ ಕೆಲವು ರೈತರು ಮಾತುಕತೆಗೆ ಬರಲಿಲ್ಲ. ರೈತರಿಗೆ ನಿಗದಿಪಡಿಸಲಾಗಿದ್ದ ಪರಿಹಾರದ ಮೊತ್ತದಲ್ಲಿ ಸರ್ಕಾರ ಶೇ.75 ರಷ್ಟನ್ನು ಭರಿಸಿ ಉಳಿಕೆ ಮೊತ್ತವನ್ನು ಪುರಸಭೆಯೇ ಪಾವತಿಸುವಂತೆ ಸೂಚಿಸಸಿತ್ತು. ಆದರೆ ಪುರಸಭೆಯಲ್ಲಿ ಸಂಪನ್ಮೂಲದ ಕೊರತೆ ಇದ್ದು, ಕೋಟ್ಯಂತರ ರೂ. ಪಾವತಿ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, 15ನೇ ಹಣಕಾಸು ಯೋಜನೆಯಲ್ಲಿ 44 ಲಕ್ಷ ರೂ. ಮೀಸಲಿಡಲಾಗಿದೆ. ಜತೆಗೆ ಸರ್ಕಾರವೂ ಉಳಿಕೆ ಹಣ ಬಿಡುಗಡೆಗೆ ಕ್ರಮ ಕೈಗೊಂಡಿದೆ. ನೀತಿ ಸಂಹಿತೆ ಕಾರಣ ತಡವಾಗಿದ್ದು, ಪರಿಹಾರದ ಮೊತ್ತ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

    ಈ ವೇಳೆ ನ್ಯಾಯಾಲಯದ ಅಮೀನರಾದ ತ್ರಿವೇಣಿ, ಆನಂದ್, ಸತೀಶ್ ರೈತ ಸಂತೋಷ್ ಇತರರು ಜಪ್ತಿ ಕಾರ್ಯದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts