More

    ನಾರಾಯಣಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ


    ಹಾಸನ : ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಬೆಂಗಳೂರಿನ ಸೋಲೂರು ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿ ಸಲಹೆ ನೀಡಿದರು.


    ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಸಕಲೇಶಪುರ ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬ ಸತ್ಯ ಅರಿತಿದ್ದ ಮಹಾತ್ಮರು 50 ವರ್ಷಗಳ ಹಿಂದೆ ರಾತ್ರಿ ಶಾಲೆ ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡಿದರು. ಮೌನ ಕ್ರಾಂತಿಯಿಂದಲೇ ಸಮಾಜವನ್ನು ಉನ್ನತ ಮಟ್ಟಕ್ಕೆ ತಂದರು. ನಾರಾಯಣ ಗುರುಗಳು ಸದಾ ಅಹಿಂಸೆಯನ್ನೆ ಪ್ರತಿಪಾದಿಸಿದ್ದು, ಅವರ ಅನುಯಾಯಿಗಳಾದ ನಾವು ಯಾರೂ ಹಿಂಸೆಯ ಹಾದಿಯಲ್ಲಿ ಹೋಗುವುದು ಸರಿಯಲ್ಲ ಎಂದರು.


    ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ನಾರಾಯಣ ಗುರುಗಳು ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ಅಕ್ಷರವಿಲ್ಲದವರಿಗೆ ಜ್ಞಾನಿಗಳಾಗಿ, ಬೆಳಕಿಲ್ಲದವರಿಗೆ ಬೆಳಕಾಗಿ ಸೇವೆ ಸಲ್ಲಿಸಿದರು. ಕರಾವಳಿ ಭಾಗದಲ್ಲಿ ಅಂದಿನ ದಿನಗಳಲ್ಲಿ ಶೋಷಿತರೆ ಹೆಚ್ಚಿದ್ದು, ಅವರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದರು. ಮನುಷ್ಯನಿಗೆ ಅನ್ನ, ಬಟ್ಟೆ ಇಲ್ಲದಿದ್ದರೂ ಚಿಂತೆಯಿಲ್ಲ, ಸ್ವಾಭಿಮಾನದ ಬದುಕು ಮುಖ್ಯ. ಇರುವವರಿಗೆ ಕೊಡುವುದು ದೊಡ್ಡದಲ್ಲ. ಇಲ್ಲದವರಿಗೆ ಸ್ವಾಭಿಮಾನದ ಬದುಕನ್ನು ಕೊಟ್ಟವರು ನಾರಾಯಣ ಗುರುಗಳು ಎಂದರು.


    ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದುಕುಮಾರ್ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ನಮ್ಮ ಸಮಾಜಕ್ಕೆ ಎಷ್ಟು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಇದೆ ಎಂದು ನೋಡಬೇಕು. ಸಂಘಟನೆ ಬಲಿಷ್ಠವಾಗಿಲ್ಲ, ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿಲ್ಲ. ಒಗ್ಗಟ್ಟಿಲ್ಲದ ಕಾರಣ ಸಮಾಜದ ಉದ್ಧಾರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. 26 ಪಂಗಡಗಳು ಒಗ್ಗೂಡಿದರೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬಹುದು. ಈ ನಿಟ್ಟಿನಲ್ಲಿ ರಾಜಕೀಯವನ್ನು ಸಮಾಜಕ್ಕೆ ತರದೆ ನಾವೆಲ್ಲ ಸಂಘಟಿತರಾಗೋಣ ಎಂದರು.


    ಸಕಲೇಶಪುರ ಆಲೂರು ತಾಲೂಕುಗಳಲ್ಲಿ ಗ್ರಾಪಂಗೆ ಆಯ್ಕೆಯಾದ ಹಲವು ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ನಾರಾಯಣ ಗುರು ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಆರ್.ಎಸ್.ಭಾಸ್ಕರ್, ಜಿಪಂ ಮಾಜಿ ಸದಸ್ಯೆಯರಾದ ಚಂಚಲಾ ಕುಮಾರಸ್ವಾಮಿ, ಸುಲೋಚನಾ ರಾಮಕೃಷ್ಣ, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್, ಬಜರಂಗದಳದ ಪ್ರಾಂತ ಸಹ ಸಂಚಾಲಕ ರಘು, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಭಾಸ್ಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts