More

    ನವರಾತ್ರಿ ಉತ್ಸವಕ್ಕೆ ಸಿಗಂದೂರು ಸಜ್ಜು; ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಒಂಬತ್ತು ದಿನವೂ ವಿವಿಧ ಶ್ರೀಗಳಿಂದ ಆಶೀರ್ವಚನ

    ಬ್ಯಾಕೋಡು: ಶರಾವತಿ ಕಣಿವೆಯ ಶಕ್ತಿದೇವತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೆ.26ರಿಂದ ಅ.5ರ ವರೆಗೆ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ.
    ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಉತ್ಸವ ಸಾಕಷ್ಟು ವಿಭಿನ್ನವಾಗಿ ಆಚರಿಸಲು ಸಿದ್ಧತೆ ನಡೆಸಿರುವ ಆಡಳಿತ ಮಂಡಳಿ, ನವರಾತ್ರಿಯ 9 ದಿನಗಳಂದು ರಾಜ್ಯದ ವಿವಿಧ ಪೀಠದ ಶ್ರೀಗಳನ್ನು ಕರೆಯಿಸಿ ಅವರಿಂದ ಆಶೀರ್ವಚನ ಕೊಡಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿದಿನ ಸಂಜೆ 6.30ರಿಂದ 7.30ರ ವರೆಗೆ ದೀಪೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಎಸ್.ರಾಮಪ್ಪ ತಿಳಿಸಿದ್ದಾರೆ.
    ಸೆ.26ರಂದು ನವರಾತ್ರಿಯ ಮೊದಲ ದಿನ ಆಲಯ ಶುದ್ಧಿಯೊಂದಿಗೆ ಶ್ರೀದೇವಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ದುರ್ಗಾ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಸಿಗಂದೂರು ಮೇಳದಿಂದ ಚಂದ್ರಹಾಸ ಚರಿತೆ ಯಕ್ಷಗಾನ ಪ್ರದರ್ಶನವಿದೆ. ಸೆ.27ಕ್ಕೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಅಂದು ರಾತ್ರಿ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. 28ಕ್ಕೆ ತಾಳಗುಪ್ಪ ಪ್ರಣವ ಪೀಠ ಕೂಡ್ಲಿಮಠದ ಶ್ರೀ ಸಿದ್ಧವೀರ ಶ್ರೀಗಳು ಆಗಮಿಸಲಿದ್ದಾರೆ. 30ಕ್ಕೆ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿಗಳು ನವರಾತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
    ಅ.1ರಂದು ಕಲಬುರಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಶ್ರೀಗಳು, 3ರಂದು ಸೋಲೂರು ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಶ್ರೀಗಳು, 4ಕ್ಕೆ ಬೆಳಗಾವಿಯ ಮಹಾಕಾಳಿ ಮಹಾ ಸಂಸ್ಥಾನ ಸದ್ಧರ್ಮ ಪೀಠದ ಅರುಣಾನಂದ ತೀರ್ಥರು ಹಾಗೂ ಅಂತಿಮ ದಿನ ಅ.5ಕ್ಕೆ ಹೊಸನಗರ ತಾಲೂಕಿನ ಸಾರಗನಜೆಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳು ವಿಶೇಷ ಆಶೀರ್ವಚನ ನೀಡಲಿದ್ದಾರೆ.
    ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಭಕ್ತಾದಿಗಳಿಗೆ ಪೂಜೆ, ಪ್ರಸಾದ ವಿನಿಯೋಗ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts