More

    ಕಾಮಣ್ಣನಿಗೆ 300 ವರ್ಷಗಳ ಇತಿಹಾಸ

    ಪ್ರಭುಸ್ವಾಮಿ ಡಿ. ಅರವಟಗಿಮಠ ನರೇಗಲ್ಲ
    ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಮೂರು ನೂರು ವರ್ಷಗಳ ಇತಿಹಾಸವಿರುವ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆದಿದೆ. ಮಕ್ಕಳಾಗದವರು ಈ ಕಾಮಣ್ಣನಿಗೆ ಉಡಿ ತುಂಬಿ ಬೇಡಿಕೊಂಡರೆ ವರ್ಷ ತುಂಬುವುದರೊಳಗಾಗಿ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಸಾವಿರಾರು ಭಕ್ತರು ಕಾಮಣ್ಣನನ್ನು ಪೂಜಿಸುತ್ತಾರೆ.
    ಪ್ರಸಕ್ತ ವರ್ಷ ಮಾ. 14 ರಂದು ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮಾ.18 ರಂದು ಬೆಳಗ್ಗೆ 7 ಗಂಟೆಗೆ ವಿಚಿತ್ರವಾದ ವೇಷಭೂಷಣ (ಸೋಗು) ಹಾಕಿಕೊಂಡು ಒಂದು ಟ್ರ್ಯಾಕ್ಟರ್​ನಲ್ಲಿ ಬಣ್ಣ ತುಂಬಿದ ಪಾತ್ರೆಗಳನ್ನು ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
    ಇಂಥ ವಿಶೇಷತೆ ಹೊಂದಿರುವ ಕಾಮಣ್ಣನನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರತಿಷ್ಠಾಪಿಸಲಾಗುತ್ತದೆ. ರತಿ-ಕಾಮರ ಜತೆಗೆ ಇಲ್ಲಿ ಕೂಡಿಸುವ ಇನ್ನಿತರ ಗೊಂಬೆಗಳಿಗೂ 10 ರಿಂದ 15 ವರ್ಷಗಳಿಗೊಮ್ಮೆ ಬಣ್ಣ ಹಚ್ಚಲಾಗುತ್ತದೆ. ಈ ಹಿಂದೆ ಉಡಿ ತುಂಬಿ ಸಂತಾನ ಭಾಗ್ಯ ಹೊಂದಿದ ತಾಯಂದಿರು ಕಾಮಣ್ಣನಿಗೆ ಸೀರೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ.
    ಹಿಂದಿನ ಹಿರಿಯರು ಅನುಸರಿಸಿದ ಸಂಪ್ರದಾಯವನ್ನೂ ಇಂದಿನ ಯುವಪೀಳಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದು ಸಂಭ್ರಮದಿಂದ ಕಾಮಣ್ಣನ ಉತ್ಸವ ಮಾಡುತ್ತಿದ್ದಾರೆ. ಮೂರು ನೂರು ವರ್ಷಗಳಿಂದಲೂ ಯಾವುದೇ ಮೂರ್ತಿಗಳನ್ನು ಬದಲಾವಣೆ ಮಾಡಿಲ್ಲ. ಅವು ಮುಕ್ಕಾಗದಂತೆ ಕಾಪಾಡಿಕೊಂಡು ಬರಲಾಗಿದೆ. ಈ ಹಿಂದೆ 2016ರಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು, 2019ರಲ್ಲಿ ಕರೊನಾ ಹಿನ್ನೆಲೆಯಲ್ಲಿ ಉತ್ಸವ ರದ್ದಾಗಿತ್ತು. ಈಗ 5 ವರ್ಷಗಳ ನಂತರ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
    ಚಕ್ಕಡಿಗಳಲ್ಲಿ ಬರುತ್ತಿದ್ದ ಜನ: ಈ ಹಿಂದೆ ಕಾಮಣ್ಣನನ್ನು ನೋಡಲೆಂದು ಸುತ್ತಲಿನ ಗ್ರಾಮಗಳಾದ ಜಕ್ಕಲಿ, ಬೂದಿಹಾಳ, ತೋಟಗಂಟಿ, ಮಾರನಬಸರಿ, ಹಾಲಕೆರೆ, ನಿಡಗುಂದಿ ಸೇರಿದಂತೆ ಅನೇಕ ಗ್ರಾಮಗಳಿಂದ ಜನರು ಚಕ್ಕಡಿಗಳನ್ನು ಕಟ್ಟಿಕೊಂಡು ಬಂದು ಕಾಮಣ್ಣನ ದರ್ಶನ ಪಡೆದುಕೊಂಡು, ರಾತ್ರಿ ನಡೆಯುವ ಗೀಗೀ ಪದಗಳನ್ನು ಕೇಳಿ ಮಾರನೇ ದಿನ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಆದರೆ, ಈಗಲೂ ಜನ ಬರುತ್ತಾರೆ ಆದರೆ, ಸ್ವಲ್ಪ ಇಳಿಮುಖವಾಗಿದೆ ಎನ್ನುತ್ತಾರೆ ಹಿರಿಯರು.
    ಪ್ರತಿದಿನ 2 ಬಾರಿ ಪೂಜೆ: ಇಲ್ಲಿರುವ ಮೂರ್ತಿಗಳನ್ನು ಐದು ದಿನಗಳ ಕಾಲ ಕೂರಿಸಿ, ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ, ಈ ಮೂರ್ತಿಗಳಿಗೆ ಪ್ರತಿದಿನ ಎರಡುಬಾರಿ ಪೂಜೆ ನೆರವೇರಿಸಲಾಗುತ್ತದೆ. ಊರಿನ ಜನರು ಜಾತಿ-ಧರ್ಮದ ಭೇದವಿಲ್ಲದೆ ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

    ನರೇಗಲ್ಲ ಕಾಮಣ್ಣನಿಗೆ ಭಕ್ತರು ಅಪಾರ. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ ಕಲ್ಪಿಸಿದ ಸಾಕಷ್ಟು ಉದಾಹರಣೆಗಳಿವೆ. ಮಡಿವಂತಿಕೆಯ ಜತೆಗೆ ಭಕ್ತಿ-ಭಾವದಿಂದ ನಡೆದುಕೊಂಡವರಿಗೆ ಫಲ ಸಿಗುತ್ತದೆ. ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೋಳಿ ಬಣ್ಣದ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
    | ಡಾ. ಜಿ.ಕೆ. ಕಾಳೆ, ಮುದುಕಪ್ಪ ಜುಟ್ಲ, ಹಿರಿಯ ನಾಗರಿಕರು ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts