More

    ನನ್ನ ತಂದೆ ಕಂಡ ಕನಸು ಈಡೇರಿದೆ

    ಎಚ್.ಡಿ.ಕೋಟೆ: ದೇವರ ಹೆಸರಿನಲ್ಲಿ ಪೂಜೆ ಮಾಡುವ ಮೂಲಕ ಶಾಸಕ ಅನಿಲ್ ಚಿಕ್ಕಮಾದು ಸೋಮವಾರ ಬೆಂಗಳೂರಿನ ಖನಿಜ ಭವನದಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

    ಶಾಸಕರು ಹೆಂಡತಿ ಸೌಮ್ಯಾ, ಮಕ್ಕಳು, ತಾಯಿ ನಾಗಮ್ಮ ಹಾಗೂ ಕುಟುಂಬ ವರ್ಗದವರ ಮತ್ತು ಕ್ಷೇತ್ರದ ಬಹುಸಂಖ್ಯಾತ ಮುಖಂಡರು ಹಾಗೂ ಅಭಿಮಾನಿಗಳ ಜೊತೆ ಖನಿಜ ಭವನದ ಮೊದಲ ಅಂತಸ್ತಿನಲ್ಲಿ ಇರುವ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.

    ಸೋಮವಾರ ಬೆಳಗ್ಗೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿದರು. ಚೇಂಬರ್‌ನಲ್ಲಿ ತಮ್ಮ ರಾಜಕೀಯ ಗುರುಗಳಾದ ಆರ್.ಧ್ರುವನಾರಾಯಣ ಹಾಗೂ ತಂದೆ ದಿ.ಚಿಕ್ಕಮಾದು ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಸಂಸ್ಥೆ ಕಡತಕ್ಕೆ ಸಹಿ ಮಾಡುವ ಮೂಲಕ ಅಧಿಕಾರ ವಹಿಸಿಕೊಂಡರು.

    ನಂತರ ತಾಲೂಕಿನಿಂದ ಬಂದಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದರು. ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಹರೀಶ್‌ಗೌಡ, ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಅವರು ಕಚೇರಿಗೆ ಬಂದು ಅನಿಲ್ ಚಿಕ್ಕಮಾದು ಅವರಿಗೆ ಶುಭ ಕೋರಿದರು.

    ನಂತರ ಮಾತನಾಡಿದ ಅನಿಲ್ ಚಿಕ್ಕಮಾದು, ಕ್ಷೇತ್ರದ ಜನರ ಋಣ ತೀರಿಸಲು ಎಷ್ಟು ಜನ್ಮ ತಾಳಿದರೂ ಸಾಧ್ಯವಿಲ್ಲ. ಇಂದು ನಮ್ಮ ಕುಟುಂಬಕ್ಕೆ ರಾಜಕೀಯ ಸ್ಥಾನ ಮಾನ ಸಿಕ್ಕಿದೆ ಎಂದರೆ ಅದಕ್ಕೆ ತಾಲೂಕಿನ ಜನರು ಕಾರಣ. ಮೊದಲ ಬಾರಿಗೆ ನಮ್ಮ ತಂದೆ ಅವಕಾಶ ನೀಡದೇ ಇದ್ದಿದ್ದರೆ ನಾನು ಇಂದು ಈ ಸ್ಥಾನ ಅಲಂಕರಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದರು.

    ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ ಅಧ್ಯಕ್ಷನಾಗಿ ತಾಲೂಕಿನ ಜನರಿಗೆ ಏನೇನೂ ಕೆಲಸ ಕಾರ್ಯ ಮಾಡಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

    ನಾನು ಜನರ ಸೇವಕನೇ ಹೊರತು ನಾಯಕನಾಗಲು ಬಯಸುವುದಿಲ್ಲ. ಸಮಾಜಕ್ಕೆ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೂ ಸೇವಕನಾಗಿ ಮಾಡುತ್ತೇನೆ. ನಾನು ಶಾಸಕನಾಗುತ್ತೇನೆಂದು ಎಂದೂ ಕನಸು ಕಂಡವನಲ್ಲ, ನಮ್ಮ ತಂದೆಯವರು ಅಕಾಲಿಕ ಮರಣ ಹಾಗೂ ನನ್ನ ರಾಜಕೀಯ ಗುರುಗಳಾದ ಆರ್.ಧ್ರುವನಾರಾಯಣ ಅವರ ಆಶೀರ್ವಾದದಿಂದ ಕ್ಷೇತ್ರದ ಶಾಸಕನಾಗಿ ಆಯ್ಕೆ ಆಗಲು ಸಾಧ್ಯವಾಯಿತು. ಅದೇ ರೀತಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನ ಬೇಕು ಎಂದು ನಾನು ಕೇಳಿರಲಿಲ್ಲ. ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರು ನನ್ನ ಕೆಲಸ ಹಾಗೂ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿ ಕೊಡಬೇಕು ಎಂದು ನನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ಅವರ ನಿರೀಕ್ಷೆ ಸುಳ್ಳಾಗದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ನನ್ನ ತಂದೆಗೆ ನಾನು ಸರ್ಕಾರಿ ವಾಹನದಲ್ಲಿ ಹೋಗಬೇಕು ಎಂಬ ಕನಸು ಇತ್ತು. ಅದಕ್ಕೆ ಕ್ಷೇತ್ರದ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವತ್ತೂ ವೈಯಕ್ತಿಕವಾಗಿ ಬೇರೆಯವರನ್ನು ಟೀಕೆ ಮಾಡಲು ಹೋಗಿಲ್ಲ. ನನ್ನ ಬಗ್ಗೆ ಟೀಕೆ ಮಾಡಿದವರಿಗೆ ಕ್ಷೇತ್ರದ ಜನರು ಬುದ್ಧಿ ಕಲಿಸಿದ್ದಾರೆ. ಭೂಮಿ ಹುತ್ತಿದರೆ ಫಲ ಕೊಡುತ್ತದೆ. ಅದೇ ರೀತಿ ಶ್ರಮ ವಹಿಸಿ ಕೆಲಸ ಮಾಡಿದೆ ಸನ್ಮಾನ ಇರುತ್ತದೆ ಎಂಬುದಕ್ಕೆ ನನಗೆ ಸಿಕ್ಕಿರುವ ಅವಕಾಶವೇ ಕಾರಣ ಎಂದರು.
    ಕಳೆದ ಐದು ವರ್ಷ ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಈ ಬಾರಿ ನಮ್ಮ ಸರ್ಕಾರ ಇರುವುದರಿಂದ ಕ್ಷೇತ್ರದ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ದಿಕ್ಕಿನಲ್ಲಿ ಹೊಸ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.
    ಸಂಸ್ಥೆಯಲ್ಲಿ ಹೊಸ ಯೋಜನೆಗಳನ್ನು ತರುವ ದಿಕ್ಕಿನಲ್ಲಿ ಕೆಲಸ ಮಾಡುತ್ತೇನೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ವಿಶೇಷ ಪ್ಯಾಕೇಜ್ ತರಲು ತಯಾರಿ ಮಾಡಿಕೊಂಡಿದ್ದೇನೆ. ವಿಶೇಷವಾಗಿ ಸಾವಯವ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೆಸಾರ್ಟ್ಸ್‌ಗಳಿಗೆ ಬರುವ ಪ್ರವಾಸಿಗರಿಗೆ ಬೆಳಗ್ಗಿನ ತಿಂಡಿಯಾಗಿ ರಾಗಿ ಗಂಜಿ, ರಾಗಿ ಅಂಬಲಿ, ಮಿಲ್ಲೆಟ್ಸ್‌ಗಳನ್ನು ನೀಡುವ ಮೂಲಕ ಸಿರಿಧಾನ್ಯದ ಆಹಾರ ಪರಿಚಯಿಸುವ ಕೆಲಸ ಮಾಡುತ್ತೇನೆ ಎಂದರು.

    ಮುಖಂಡರಾದ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಕಾವೇರಪ್ಪ, ನರಸೀಪುರ ರವಿ, ನಾಗನಹಳ್ಳಿ ಪ್ರದೀಪ್, ಶಿವಪ್ಪಕೋಟೆ, ಕ್ಯಾತನಹಳ್ಳಿ ನಾಗರಾಜು, ಜಿನ್ನಹಳ್ಳಿ ರಾಜನಾಯಕ, ಶಂಭುಲಿಂಗನಾಯಕ, ಮೊತ್ತ ಶಿವಮಲ್ಲಪ್ಪ, ದಸಂಸ ಕೆ.ಎಂ.ಹಳ್ಳಿ ಸಣ್ಣಕುಮಾರ್, ಸತೀಶ್‌ಗೌಡ, ಕೊಡಸೀಗೆ ರಾಜೇಗೌಡ, ಬಾಲಯ್ಯ, ಆನಂದ, ರವಿ ಜಿ.ಜಿ ಕಾಲನಿ, ಸ್ಟೂಡಿಯೋ ಪ್ರಕಾಶ, ಪರಶಿವಮೂರ್ತಿ, ಪಿ.ನಾಗರಾಜು, ಮರಿದೇವಯ್ಯ, ವನಸಿರಿ ಶಂಕರ, ಕಂದೇಗಾಲ ಶಿವರಾಜು, ಮುರುಗನಹಳ್ಳಿ ಮಂಜುನಾಥ್, ಸಿದ್ದರಾಮ, ಸರಗೂರು ಶ್ರೀನಿವಾಸ್, ಬೀರವಾಳ್ ಬಸವರಾಜು ಇದ್ದರು.

    ಎಚ್.ಡಿ.ಕೋಟೆ ಬೆಂಗಳೂರಿನ ಖನಿಜ ಭವನದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು. ಪತ್ನಿ ಸೌಮ್ಯಾ, ತಾಯಿ ನಾಗಮ್ಮ, ಮಕ್ಕಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts