More

    ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, 3 ವರ್ಷಗಳ ಹೋರಾಟಕ್ಕೆ ಜಯ, ಅವಿರೋಧ ಆಯ್ಕೆಯಾದವರಿಗೆ ಸನ್ಮಾನ

    ನೆಲಮಂಗಲ: ನಗರಸಭೆಗೆ ನೂತನ ಅಧ್ಯಕ್ಷರಾಗಿ ಲತಾ ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಸುಜಾತಾ ಮುನಿಯಪ್ಪ ಅವಿರೋಧ ಆಯ್ಕೆಯಾದರು.

    ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಲತಾಹೇಮಂತಕುಮಾರ್, ಎಸ್‌ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತಾ ಮುನಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ತೇಜಸ್ ಘೋಷಣೆ ಮಾಡಿದರು. ತಹಸೀಲ್ದಾರ್ ಕೆ.ಮಂಜುನಾಥ್, ಹೆಚ್ಚುವರಿ ತಹಸೀಲ್ದಾರ್ ಪ್ರಕಾಶ್, ಪೌರಾಯುಕ್ತ ರಾಜಶೇಖರ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಗುಬ್ಬಿ ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ರವಿ, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಆರ್.ಗೌಡ್ರು, ಮುಖಂಡರಾದ ದಾಬಸ್‌ಪೇಟೆ ಜಯಣ್ಣ, ಪರಮೇಶ್, ಸಿದ್ದರಾಮು ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಕೋರಿದರು.

    23 ಚುನಾಯಿತ ಸದಸ್ಯರ ಸತತ 3 ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಪಕ್ಷಾತೀತವಾಗಿ ಅವಿರೋಧ ಆಯ್ಕೆ ಮಾಡಿದ ಸದಸ್ಯರ ಸಹಕಾರ ಪಡೆದು ನಗರಸಭೆ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷೆ ಲತಾಹೇಮಂತ್‌ಕುಮಾರ್ ತಿಳಿಸಿದರು.
    ಆರಂಭದಿಂದಲೂ ಚುನಾಯಿತ ಸದಸ್ಯರ ಬೆಂಬಲಕ್ಕೆ ನಿಂತಿದ್ದು ನಗರಸಭೆ ಸಮಗ್ರ ಅಭಿವೃದ್ಧಿಗೆ ಬೇಕಿರುವ ಹೆಚ್ಚಿನ ಅನುದಾನ ದೊರಕಿಸಿಕೊಡಲಾಗುವುದು ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಭರವಸೆ ನೀಡಿದರು.

    ನಗರಸಭೆ ಸದಸ್ಯರಾದ ಕೆ.ಎಂ.ಶಿವಕುಮಾರ್, ಗಂಗಾಧರ್‌ರಾವ್, ಎನ್.ಆಂಜಿನಪ್ಪ, ರಾಜಮ್ಮಪಿಳ್ಳಪ್ಪ, ಪುಷ್ಪಲತಾಮಾರೇಗೌಡ, ಎನ್.ಗಣೇಶ್, ಸುಧಾಕೃಷ್ಣಪ್ಪ, ಭಾಗ್ಯಾ ನರಸಿಂಹಮೂರ್ತಿ, ವಕೀಲ ಸಿ.ಪ್ರದೀಪ್, ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಲೋಲಾಕ್ಷಿ ಗಂಗಾಧರ್, ನರಸಿಂಹಮೂರ್ತಿ, ಸುನೀಲ್‌ಮೂಡ್, ಅಂಜನಮೂರ್ತಿ, ಎಂ.ಎನ್.ಚೇತನ್, ಭಾರತೀಬಾಯಿ, ಪದ್ಮನಾಭಪ್ರಸಾದ್, ಎ.ಪುರುಷೋತ್ತಮ್, ಜಿ.ಆನಂದ್, ಶಾರದಾಉಮೇಶ್, ದಾಕ್ಷಾಯಣಿ ರವಿಕುಮಾರ್, ಹೆಚ್ಚುವರಿ ಕೌನ್ಸಿಲರ್ ಆಂಜಿನಮೂರ್ತಿ, ಮುನಿರಾಜು, ರಾಮಮೂರ್ತಿ, ಕೃಪಾನಂದ, ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ರವಿ, ಚಂದ್ರಶೆಟ್ಟಿ, ಮುಖಂಡರಾದ ಎ.ಪಿಳ್ಳಪ್ಪ, ನರಸಿಂಹಮೂರ್ತಿ, ನಾರಾಯಣ್‌ರಾವ್ ಮತ್ತಿತರರು ಇದ್ದರು.

    ಪ್ರಕರಣದ ಹಿನ್ನಲೆ: 2019ರ ಜೂನ್‌ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 13, ಕಾಂಗ್ರೆಸ್ 7, ಬಿಜೆಪಿ 2, 1ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. 2019ರ ಡಿಸೆಂಬರ್ 26ರಂದು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದ ಸರ್ಕಾರ ಪುರಸಭೆ ಚುನಾಯಿತ ಸದಸ್ಯರನ್ನೇ ನಗರಸಭಾ ಸದಸ್ಯರಾಗಿ ಮೇಲ್ದರ್ಜೆಗೇರಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ್ದ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕಸದಸ್ಯ ಹಾಗೂ ದ್ವಿಸದಸ್ಯ ಪೀಠ ನಗರಸಭೆಯ 31 ವಾರ್ಡ್‌ಗಳಿಗೆ ಮತ್ತೆ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚುನಾಯಿತ ಸದಸ್ಯರು ಹಾಗೂ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

    ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಮಾತ್ರಕ್ಕೆ ಚುನಾಯಿತ ಸದಸ್ಯರ ಅಧಿಕಾರ ಮೊಟಕುಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕೆಂಬ ನಿಖರ ಕಾಯ್ದೆ ಇಲ್ಲ. ಚುನಾಯಿತ ಸದಸ್ಯರನ್ನು ಮುಂದುವರಿಸಿ, ವಿಲೀನಗೊಂಡಿರುವ ಹೊಸ ಪ್ರದೇಶಗಳಿಗೆ ಕಲಂ360(ಡಿ)ಯಡಿ ಹೆಚ್ಚುವರಿ ಕೌನ್ಸಿಲರ್ ನೇಮಕ ಮಾಡಿ ನೂತನ ನಗರಸಭೆ ಆಡಳಿತ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಜತೆಗೆ ಸ್ಥಗಿತಗೊಳಿಸಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts