More

    ಧಾರಾಕಾರ ಮಳೆಗೆ ಕುಸಿದ ಮನೆಗೋಡೆ, ಜನ ಪ್ರಾಣಾಪಾಯದಿಂದ ಪಾರು, ಕೆರೆ-ಕುಂಟೆಗಳಲ್ಲಿ ಜಲರಾಶಿ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳ ಗೋಡೆ ಕುಸಿದಿವೆ.

    ಸೋಮವಾರ ರಾತ್ರಿಯಿಡೀ ದೊಡ್ಡಬಳ್ಳಾಪುರ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಗುಮ್ಮಘಟ್ಟ ರಾಮಯ್ಯ ಎಂಬುವವರ ತೋಟದಲ್ಲಿ ನಿರ್ಮಿಸಿದ್ದ ಮನೆ ಗೋಡೆ ಕುಸಿದುಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಪ್ರೇಮ್‌ನಾಥ್ ಎಂಬುವರು ಅದೇ ಮನೆಯಲ್ಲಿ ಮಗ್ಗ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆಯಷ್ಟೇ ಮಗ್ಗಗಳನ್ನು ಬೇರೊಂದು ಮನೆಗೆ ಸ್ಥಳಾಂತರಿಸಿದ್ದರು. ಮತ್ತೊಂದೆಡೆ ಕುರುಬರಹಳ್ಳಿಯಲ್ಲಿಯೂ ಮನೆ ಕುಸಿದು ಬಿದ್ದಿದೆ. ಹಳೇ ಮನೆ ಕುಸಿದು ಬಿದ್ದಿದ್ದು, ಯಾರೂ ವಾಸವಿಲ್ಲದ್ದರಿಂದ ಯಾವುದೇ ಅನಾಹುತವಾಗಿಲ್ಲ.

    ಕುಂದಾಣದಲ್ಲಿ ಅಬ್ಬರಿಸಿದ ಮಳೆ: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ವಿಶ್ವನಾಥಪುರದ ಶಾಂತಮ್ಮ ಮುನಿಆಂಜಿನಪ್ಪ ಅವರ ಮನೆಗೋಡೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ ಸ್ಥಳ ಪರಿಶೀಲನೆ ನಡೆಸಿ ಪಂಚಾಯಿತಿಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

    ಮನೆ ಛಾವಣಿಗಳು ದಿಕ್ಕಾಪಾಲು: ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜಾನುವಾರುಗಳ ಶೆಡ್‌ಗಳು, ತಾತ್ಕಾಲಿಕ ಶೆಡ್‌ಗಳು ಸೇರಿ ಅನೇಕ ಕಡೆಗಳಲ್ಲಿ ಛಾವಣಿಗಳು ಹಾರಿವೆ. ಕೆಲವು ಕಡೆಗಳಲ್ಲಿ ತೆಂಗಿನ ಮರಗಳು ಮುರಿದು ಬಿದ್ದಿವೆ. ಅಡಕೆ ತೋಟಗಳಿಗೆ ಹಾನಿಯಾಗಿದೆ.

    ವಿದ್ಯುತ್ ಕಣ್ಣಾಮುಚ್ಚಾಲೆ: ಬೆಳಗ್ಗೆಯಿಂದ ತಡರಾತ್ರಿವರೆಗೆ ಆಗಾಗ ಬಿಡುವು ನೀಡಿ ಸುರಿಯುತ್ತಿರುವ ಮಳೆಯಿಂದಾಗಿ ದೇವನಹಳ್ಳಿ ತಾಲೂಕಿನ ಕುಂದಾಣ, ಚನ್ನರಾಯಪಟ್ಟಣ, ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ, ಸೂಲಿಬೆಲೆ, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು, ಮಧುರೆ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ದಾಬಸ್‌ಪೇಟೆ ಮತ್ತಿತರ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ಲೈನ್‌ಗಳ ಮೇಲೆ ಮುರಿದು ಬಿದ್ದಿವೆ. ನಿರಂತರ ಮಳೆ ಕಾರಣದಿಂದ ತುರ್ತಾಗಿ ರಿಪೇರಿ ಕೆಲಸ ಮಾಡಲು ತೊಡಕಾಗಿದ್ದು ಗ್ರಾಮಸ್ಥರು ಕತ್ತಲೆಯಲ್ಲಿ ಕಳೆಯುವಂತಾಗಿದೆ.

    ಕೆರೆ-ಕುಂಟೆಗಳು ಭರ್ತಿ: ಕುಂದಾಣ, ವಿಶ್ವನಾಥ ಪುರ, ಜಾಲಿಗೆ, ಆಲೂರು ದುದ್ದನಹಳ್ಳಿ, ಕಾರಹಳ್ಳಿ, ಮತ್ತು ಕೊಯಿರಾ ಗ್ರಾಪಂಗಳ ಬಹುತೇಕ ಕೆರೆ-ಕುಂಟೆಗಳಲ್ಲಿ ನೀರು ಭರ್ತಿಯಾಗಿದೆ. ದೊಡ್ಡಬಳ್ಳಾಪುರದ ಗುಂಡಮಗೆರೆ ಕೆರೆ ಸೇರಿ ಹಲವು ಕೆರೆಗಳು ಕೋಡಿ ಹರಿಯುತ್ತಿವೆ. ಅಂಥ ಕೆರೆಗಳಿಗೆ ಸ್ಥಳೀಯರು ಬಾಗಿನ ಅರ್ಪಿಸಲು ಮುಂದಾಗುತ್ತಿರುವ ದೃಶ್ಯ ಕಂಡುಬರುತ್ತಿದೆ. ವಿಜಯದಶಮಿ ಹಿನ್ನೆಲೆಯಲ್ಲಿ ಅನೇಕ ದೇಗುಲಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಉತ್ಸವಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗುಂಡಿಗಳಲ್ಲಿ ಮಳೆನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts