More

    ಧಾರವಾಡದಲ್ಲೂ ಉಗ್ರರಿಗೆ ತರಬೇತಿ, ಕೇಂದ್ರದ ವೈಫಲ್ಯವೇ ಕಾರಣವಾ? ಸಚಿವ ಸಂತೋಷ ಲಾಡ್ ಹೇಳಿದ್ದೇನು?

    ವಿಜಯಪುರ: ಉಗ್ರರು ದೇಶದಲ್ಲಿ ಬಂದು ತರಬೇತಿ ಕೊಡುತ್ತಿದ್ದಾರೆಂದರೆ ಅದು ಕೇಂದ್ರದ ವೈಫಲ್ಯ. ಹೀಗಾಗಿ ಕೇಂದ್ರದ ಬಿಜೆಪಿ ಸರ್ಕಾರವೇ ಇದಕ್ಕೆ ಉತ್ತರ ಕೊಡಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದ್ದಾರೆ.

    ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸೆರೆಯಾದ ಮೂವರು ಧಾರವಾಡದಲ್ಲಿ ತರಬೇತಿ ಪಡೆದಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಕೇಂದ್ರ ಸರಕಾರದ ವೈಫಲ್ಯ. ಈ ರೀತಿ ನಮ್ಮ ದೇಶದಲ್ಲಿ ಬಂದು ಉಗ್ರರು ತರಬೇತಿ ನೀಡುತ್ತಿದ್ದಾರೆಂದರೆ ಅದಕ್ಕೆ ಕೇಂದ್ರ ಕೂಡ ಕಾರಣ ಎಂಬುದು ನನ್ನ ಭಾವನೆ ಎಂದರು.

    ಶಿವಮೊಗ್ಗ ಕೋಮು ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕೋಮು ಗಲಾಟೆಯಾದರೂ ಕಾಂಗ್ರೆಸ್ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿಯೂ ಕೋಮುಗಲಾಟೆಗಳಾಗಿದ್ದವು. ಈ ಕೋಮುಗಲಾಟೆ ಎಬ್ಬಿಸುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ದೇಶದಲ್ಲಿ ಸೌಹಾರ್ದತೆ ಇರಬೇಕು. ಶಿವಮೊಗ್ಗ ಪ್ರಕರಣ ತನಿಖೆಯಲ್ಲಿದೆ. ಶೀಘ್ರದಲ್ಲಿಯೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು.

    ಗಲಾಟೆಗಳನ್ನು, ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ಗಲಾಟೆಗಳಿಗಾಗಿಯೇ ಬಿಜೆಪಿ ಕಾಯುತ್ತಿರುತ್ತದೆ. ಗಲಾಟೆ ನಡೆದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ. ಆದರೆ, ಮಣಿಪುರದಲ್ಲಾದ ಘಟನೆಗಳ ಬಗ್ಗೆ ಬಿಜೆಪಿ ಚಕಾರವೆತ್ತುವುದಿಲ್ಲ. ಹಿಂದು-ಮುಸ್ಲಿಂರಲ್ಲಿರುವ ಬಡವರ ಬಗ್ಗೆ ಮಾತನಾಡಲ್ಲ ಎಂದು ಕಿಡಿಕಾರಿದರು.

    ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ

    ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡಿದ ನಂತರ ಈವರೆಗೆ ಕಾಂಗ್ರೆಸ್ ಗ್ರಾಫ್ ಏರಿಕೆಯಾಗುತ್ತಿದೆ. ಕರ್ನಾಟಕಕ್ಕೆ ಬಂದು ಬಿಜೆಪಿ ಅವರು ಬಹಳಷ್ಟು ಪ್ರಯತ್ನ ಮಾಡಿದರೂ ಗೆಲ್ಲಲಾಗಲಿಲ್ಲ. ರಾಜಸ್ಥಾನ, ತೆಲಾಂಗಣ, ಮಧ್ಯ ಪ್ರದೇಶದಲ್ಲಿ ನಮ್ಮದೇ ಮೇಲುಗೈ ಇದೆ. ಇಂಡಿಯಾ ಅಲೈನ್ಸ್ಸ್‌ಗೆ ಬಿಜೆಪಿ ಹೆದರಿದೆ. ಇಲ್ಲವಾದಲ್ಲಿ ವಿಶ್ವ ಗುರುಗಳು ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಕಾರಣವೇನು? ಅವರು ವೀಕ್ ಆಗಿದ್ದಾರೆನ್ನಿಸುತ್ತಿದೆ. ನಂಬರ್ ಹೆಚ್ಚಿಸಿಕೊಳ್ಳಲು ಸಿಕ್ಕ ಸಿಕ್ಕವರ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವುದೇ ಸಿದ್ದಾಂತವಿಲ್ಲ ಎಂದರು.
    ಇನ್ನು ಜೆಡಿಎಸ್ ಪಕ್ಷವನ್ನು ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲದಂತೆ ವಿಲೀನ ಮಾಡುತ್ತಾರೆಂದರೆ ಆ ಪಕ್ಷದ ಜಾತ್ಯತೀತ ಪರದೆ ಹಿಂದೆ ಸರಿದಿದೆ ಎಂದರ್ಥ. ಸಿ.ಎಂ. ಇಬ್ರಾಹಿಂ ಯಾವಾಗಲೂ ಸೆಕ್ಯೂಲರ್ ಆಗಿದ್ದವರು. ಅವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆಂಬ ಮಾತಿದೆ. ಬಂದರೆ ಬಹಳ ಒಳ್ಳೆಯದು. ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದರು.

    ಲಿಂಗಾಯತ ಅಧಿಕಾರಿಗಳ ವಿಚಾರ

    ಕಾಂಗ್ರೆಸ್ ಆಡಳಿತದಲ್ಲಿ ಲಿಂಗಾಯತ ಅಧಿಕಾರಿಗಳ ನಿರ್ಲಕ್ಷೃ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಲಾಡ್, ಯಾವುದೇ ಜಾತಿ ನೋಡಿ ಅಧಿಕಾರಿಗಳನ್ನು ನೇಮಕ ಮಾಡುವುದಿಲ್ಲ. ಕಾಂಗ್ರೆಸ್ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ನಂಬಿಕೆ ಹೊಂದಿದ ಪಕ್ಷ. ಶಾಮನೂರ ಶಿವಶಂಕರಪ್ಪ ಅವರು ಹಿರಿಯರು, ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts