More

    ಧರ್ಮ, ಜಾತಿ ಹೆಸರಿನಲ್ಲಿ ವಿವಾದ ಸೃಷ್ಟಿ ಬೇಡ

    ಬಾಳೆಹೊನ್ನೂರು: ದೇಶದ ಸ್ವಾತಂತ್ರ್ಯ್ಕಾಗಿ ಕೋಟ್ಯಂತರ ದೇಶ ಭಕ್ತರು ನೀಡಿದ ತ್ಯಾಗ ಬಲಿದಾನವನ್ನು ಮರೆಯದೇ ಕೃತಜ್ಞತೆ ಸಲ್ಲಿಸಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆ ಮತ್ತು ಶ್ರೀ ವೀರಭದ್ರಸ್ವಾಮಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

    ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮಹಾತ್ಮ ಗಾಂಧಿ, ಸುಭಾಷ್​ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು, ಬಾಲಗಂಗಾಧರನಾಥ ತಿಲಕ್, ಲಾಲಾ ಲಜಪತರಾಯ, ಬಿಪಿನ್ ಚಂದ್ರಪಾಲ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಇನ್ನು ಹಲವು ದೇಶಭಕ್ತರ ಶ್ರಮವನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಬೇಕು ಎಂದರು.

    ಪ್ರತಿಯೊಬ್ಬರಲ್ಲಿ ದೇಶಾಭಿಮಾನ ರಾಷ್ಟ್ರಭಕ್ತಿ ಇರಬೇಕು. ದೇಶ ನನ್ನದು ನಾಡು ನನ್ನದು ಎನ್ನುವ ಸ್ವಾಭಿಮಾನ ಮೂಡಬೇಕಿದೆ. ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕೃತಿ ನಮ್ಮದು. ಧರ್ಮಕ್ಕಿಂತ ದೇಶ ದೊಡ್ಡದು. ದೇಶದಲ್ಲಿ ಶಾಂತಿ ನೆಮ್ಮದಿ ಇದ್ದರೆ ಬದುಕಿ ಬಾಳಬಹುದು. ಭಾರತ ಸಂವಿಧಾನದಲ್ಲಿ ಎಲ್ಲರೂ ಸಮಾನವಾಗಿ ಬಾಳುವ ಹಕ್ಕು ಕೊಟ್ಟಿದ್ದಾರೆ. ಆದರೆ ಧರ್ಮ, ಜಾತಿಗಳ ಹೆಸರಿನಲ್ಲಿ ಕಲುಷಿತ ವಾತಾವರಣ ಉಂಟುಮಾಡಬಾರದು ಎಂದು ಹೇಳಿದರು.

    ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣ ಮಧ್ಯದಲ್ಲಿರುವ ಅಶೋಕ ಚಕ್ರ ಸಾಮರಸ್ಯ ಸೌಹಾರ್ದದ ಸಂಕೇತವಾಗಿರುವುದನ್ನು ಗಮನಿಸಬಹುದು. ತ್ಯಾಗ ಔದಾರ್ಯ, ಪರಿಶುದ್ಧತೆ ಪಾರದರ್ಶಕತೆ ಮತ್ತು ಶಾಂತಿ ಸಮೃದ್ಧಿಯ ಸಂಕೇತವನ್ನು ಬಣ್ಣದಿಂದ ತಿಳಿಯಬಹುದು. ಯುವಜನರಲ್ಲಿ ಸಾಮರಸ್ಯ, ಸ್ವಾಭಿಮಾನ, ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕ ಮತ್ತು ದೇಶಭಕ್ತಿ ಗುಣ ಬೆಳೆಸುವ ಕೆಲಸ ಆಗಬೇಕಾಗಿದೆ. ದೇಶ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಮ್ಮ ಕೊಡುಗೆ ಏನು ಅನ್ನುವುದನ್ನು ತಿಳಿದುಕೊಂಡು ಬಾಳಬೇಕು ಎಂದರು.

    ದೈಹಿಕ ಶಿಕ್ಷಣ ಶಿಕ್ಷಕ ಜಗದ್ಗುರುಗಳನ್ನು ಆಹ್ವಾನಿಸಿ ಧ್ವಜಾರೋಹಣ ನೆರವೇರಿಸಲು ಸಹಕರಿಸಿದರು. ಬಿ.ಕಣಬೂರು ಗ್ರಾಪಂ ಸದಸ್ಯ ಮಹೇಶಾಚಾರ್ಯ, ಜಗದೀಶ್ಚಂದ್ರ, ಕೋಕಿಲಾ, ಪ್ರಭಾರ ಮುಖ್ಯಶಿಕ್ಷಕ ವೀರೇಶ ಕುಲಕರ್ಣಿ, ವಿದ್ಯಾರ್ಥಿಗಳು ರಾಷ್ಟ್ರಗೀತೆ, ವಂದೇ ಮಾತರಂ ಗೀತೆ ಗಾಯನ, ಧ್ವಜವಂದನೆ ಮೂಲಕ ಶಿಕ್ಷಣ ಪ್ರೇಮಿಗಳ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts