More

    ದ್ವೇಷ ಬಿಟ್ಟು ಕೆಲಸ ಮಾಡಿದರೆ ಅಭಿವೃದ್ಧಿ

    ರೋಣ: ರಾಜಕಾರಣಿಗಳು ಸ್ವಪ್ರತಿಷ್ಠೆ, ದ್ವೇಷದ ರಾಜಕಾರಣ ಬಿಟ್ಟು ಕೆಲಸ ಮಾಡಿದಾಗ ಮಾತ್ರ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
    ತಾಲೂಕಿನ ಹುಲ್ಲೂರ ಗ್ರಾಮದಲ್ಲಿ 1.60 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮದ 1638 ಮನೆಗಳಿಗೆ ನಳ ಸಂಪರ್ಕ ಹಾಗೂ 41 ಲಕ್ಷ ರೂಪಾಯಿ ವೆಚ್ಚದಲ್ಲಿ ಹುಲ್ಲೂರ-ಬೆನಹಾಳ ರಸ್ತೆ ದುರಸ್ತಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ‘ಇವತ್ತು ನಾನು, ನಾಳೆ ಯಾವಗಲ್ ಅವರು ಅಧಿಕಾರದಲ್ಲಿರಬಹುದು. ಆದರೆ, ನಾವು ಅಧಿಕಾರದಲ್ಲಿದ್ದಾಗ ಕೇವಲ ಮಾತುಗಳೇ ಆಗಬಾರದು. ನಾವು ಮಾಡುವ ಅಭಿವೃದ್ಧಿ ಕೆಲಸಗಳು ಮಾತಾಗಬೇಕು. ಕೆಲವು ಅಭಿವೃದ್ಧಿ ಪರ ವಿಷಯವಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ನನ್ನ ಮಧ್ಯೆ ಮಾತಿನ ಸಮರ ನಡೆದಿರಬಹುದು. ಅದು ಕೇವಲ ಅಭಿವೃದ್ಧಿ ವಿಷಯವಾಗಿ. ಅದರ ಹೊರತಾಗಿ ವೈಯಕ್ತಿಕವಲ್ಲ’ ಎಂದು ಹೇಳುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆಯುತ್ತಿರುವ ಒಳ ಜಗಳದ ಕುರಿತು ಸಚಿವರು ಮಾರ್ವಿುಕವಾಗಿ ಹೇಳಿದರು.
    ಸಿ.ಸಿ. ಪಾಟೀಲ ಅವರ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಹುಲ್ಲೂರ ಗ್ರಾಮದ ತಾಪಂ ಮಾಜಿ ಅಧ್ಯಕ್ಷ ವೀರಯ್ಯ ಹಿರೇಮಠ ಅವರು ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ‘ನೀವು ಮಾಡಿದ ಅಭಿವೃದ್ಧಿ ಕೆಲಸಗಳು ನಮಗೆ ಗೊತ್ತಿವೆ. ಹುಲ್ಲೂರ ಗ್ರಾಪಂ ನೂತನ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯ ಅತ್ಯಂತ ಕಳಪೆಯಾಗಿದೆ. ಹುಲ್ಲೂರ ಹಳ್ಳದ ದಪ್ಪ ಉಸುಕು ಬಳಸುತ್ತಿದ್ದಾರೆ. ಈ ಬಗ್ಗೆ ನಾವು ಸಾಕಷ್ಟು ದೂರು ನೀಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಜೋರು ದನಿಯಲ್ಲಿ ಮಾತನಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಹಿಂದೆ ನೀವು ಮಾಡಿರುವ ಗ್ರಾಮದ ಸಿಸಿ ರಸ್ತೆ ಹೋಗಿ ನೋಡಿ, ಆಮೇಲೆ ಮಾತನಾಡಿ’ ಎಂದು ತಿರುಗೇಟು ನೀಡುವ ಮೂಲಕ ಅವರ ಬಾಯಿ ಮುಚ್ಚಿಸಿದರು.
    ಹುಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಾ ಬರಡ್ಡಿ, ಉಪಾಧ್ಯಕ್ಷ ಬಸವರಾಜ ಬ್ಯಾಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಸಾತೇನಹಳ್ಳಿ ಇತರರಿದ್ದರು.
    687 ಮನೆಗಳಿಗೆ ನಲ್ಲಿ ಸಂಪರ್ಕ
    ಹೊಳೆಆಲೂರ: ಒಂದೂವರೆ ವರ್ಷದಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ಆದಾಯವಿರದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರು ಗ್ರಾಮಗಳ ಅಭಿವೃದ್ಧಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
    ಸಮೀಪದ ಸೋಮನಕಟ್ಟಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ 83.83 ಲಕ್ಷ ರೂ. ವೆಚ್ಚದಲ್ಲಿ 687 ಮನೆಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಸಂಪರ್ಕ ನೀಡುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕರ್ತವ್ಯಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಬೇಕು. ಶಿಕ್ಷಕರು ಮಕ್ಕಳ ಮನ ಮುಟ್ಟುವಂತೆ ಪಾಠ ಮಾಡಬೇಕು ಎಂದರು. ತಾ.ಪಂ. ಮಾಜಿ ಅಧ್ಯಕ್ಷ ವೀರಯ್ಯ ಹಿರೇಮಠ, ಮಹಾಂತೇಶ ಹದಲಿ, ಬಸವರಾಜ ಅವರಾದಿ, ಶಾಂತವ್ವ ಅನವಾಲದ, ವಿಜಯಲಕ್ಷ್ಮೀ ಹುಬ್ಬಳ್ಳಿ, ರಾಮಪ್ಪ ಬಿಂಗಿ, ಕಲ್ಲನಗೌಡ ಪಾಟೀಲ, ಪಡಿಯಪ್ಪ ಪೂಜಾರ, ಮುತ್ತಣ್ಣ ಜಂಗಣ್ಣವರ, ಜಗದೀಶ ಬ್ಯಾಡಗಿ, ರಾಮನಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ಅಶೋಕ ಹೆಬ್ಬಳ್ಳಿ, ಸಂಗಪ್ಪ ದುಗ್ಗಲದ, ಗಿರೀಶಗೌಡ ಚನ್ನಪ್ಪಗೌಡ್ರ, ಬಸವಂತಪ್ಪ ತಳವಾರ, ಸೋಮನಗೌಡ ಹುಡೇದಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts