More

    ದೇಶದೊಳಗೆ ಸಂವಾದ ಎಂಬುದೂ ಅಪಾಯದಲ್ಲಿದೆ

    ಚಿತ್ರದುರ್ಗ: ಜಾತಿ-ಧರ್ಮ, ವರ್ಣ-ವರ್ಗದ ಕಾರಣಕ್ಕೆ ಸಮಾಜ ವಿಭಜನೆಗೊಂಡಿದೆ. ಬೌದ್ಧಿಕ ವಲಯವೂ ವಿಭಜಕ ಪ್ರವೃತ್ತಿಯಿಂದ ಸಂವಾದ ಗುಣ ಕಳೆದುಕೊಂಡು ಆತಂಕಕಾರಿ ಸ್ಥಿತಿಯಲ್ಲಿದೆ ಎಂದು ಬರಹಗಾರ ಪ್ರೊ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.

    ತಮ್ಮ ‘ಕಾಗೆ ಕಾರುಣ್ಯದ ಕಣ್ಣು’ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಒಂದು ಕಾಲದಲ್ಲಿ ಮಾಧ್ಯಮಗಳು ಆಳುವ ಸರ್ಕಾರಕ್ಕೆ ವಿಮರ್ಶಕರಾಗಿ ಕೆಲಸ ಮಾಡುತ್ತಿದ್ದವು. ಆದರೆ, ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಮಾಧ್ಯಮಗಳು ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಬಹಳ ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

    ಭಿನ್ನಾಭಿಪ್ರಾಯಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಲಕ್ಷಣ. ಆದರೆ, ಸಂಘರ್ಷ ರೀತಿಯಲ್ಲಿ ಬೀದಿ ಜಗಳವಾಗುತ್ತಿದೆ. ಅಲ್ಲದೆ, ನಮ್ಮ ದೇಶದೊಳಗೆ ಸಂವಾದ ಎಂಬುದೂ ಅಪಾಯದಲ್ಲಿದೆ. ವ್ಯಕ್ತಿ, ಜಾತಿ, ಧರ್ಮಗಳ ಮಧ್ಯೆ ದ್ವೇಷ ಮುಖ್ಯವಲ್ಲ, ಸಂಘರ್ಷವೂ ಬೇಕಿಲ್ಲ. ಅದು ವೈಚಾರಿಕವಾಗಿ ಸಂವಾದಗಳ ಮೂಲಕ ಪ್ರಸ್ತುತ ದಿನಗಳಲ್ಲಿ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದರು.

    ಧರ್ಮ ಗುರುಗಳು, ರಾಜಕೀಯ ವಿಶ್ಲೇಷಕರು, ಚಿಂತಕರು, ಕಾನೂನು ತಜ್ಞರು ಯಾರ ಪರವಿಲ್ಲದೆ ಮಾನಸಿಕ ದೂರ ಕಾಪಾಡಿಕೊಳ್ಳಬೇಕು. ಆದರೆ, ಅದು ಕೂಡ ಮರೆಯಾಗುತ್ತಿದೆ. ತತ್ವಾಂತರ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಪಂಪ, ಕುಮಾರವ್ಯಾಸ, ಬಸವಣ್ಣ ಪ್ರಭುತ್ವದ ವಿರುದ್ಧ ವಿಮರ್ಶಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ನಮಗೆ ಇದನ್ನು ಕಲಿಸಿಕೊಟ್ಟಿದೆ. ಈ ಮಾರ್ಗದಲ್ಲಿ ಸಾಗದಿದ್ದರೆ, ಅಪಾಯ ತಪ್ಪಿದ್ದಲ್ಲ ಎಂದ ಅವರು, ದೇಶದೊಳಗೆ ಸಮಾನತೆ ಸಾಕಾರಗೊಳಿಸಲು ಮನಸ್ಸಿನಲ್ಲಿ ತಾಯ್ತನ, ಮಿದುಳಿನಲ್ಲಿ ಮಗುತನ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts