More

    ದೇವಿಮನೆ ಘಟ್ಟ ವ್ಯಾಪ್ತಿಯಲ್ಲಿ ಯಥಾಸ್ಥಿತಿ

    ಶಿರಸಿ: ನೂತನವಾಗಿ ಘೊಷಿಸಲಾದ ರಾಷ್ಟ್ರೀಯ ಹೆದ್ದಾರಿ ‘766-ಇ’ ವ್ಯಾಪ್ತಿಯಲ್ಲಿ ಶಿರಸಿ- ಕುಮಟಾ ರಾಜ್ಯ ಹೆದ್ದಾರಿ ಸೇರ್ಪಡೆಯಾಗಿದೆ. ನೂತನ ರಾಷ್ಟ್ರೀಯ ಹೆದ್ದಾರಿಯನ್ನು ಅಗಲದಲ್ಲಿ ವಿಸ್ತರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಪಶ್ಚಿಮಘಟ್ಟ ಪ್ರದೇಶದ ದೇವಿಮನೆ ಹಾಗೂ ಬಂಡಲ ಘಟ್ಟ ಪ್ರದೇಶದ ಕೆಲ ಸ್ಥಳಗಳಲ್ಲಿ ರಸ್ತೆಯನ್ನು ಅಗಲದಲ್ಲಿ ವಿಸ್ತರಿಸದೆ, ಯಥಾಸ್ಥಿತಿ ಕಾಪಾಡಿಕೊಂಡು ಯೋಜನೆ ಅನುಷ್ಠಾನ ಮಾಡಬೇಕು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಸೂಚಿಸಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

    ಶಿರಸಿ ಹಾಗೂ ಹೊನ್ನಾವರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ರಸ್ತೆ ಅಭಿವೃದ್ಧಿ ಯೋಜನೆ ಕಾರ್ಯಗತಗೊಳ್ಳಲಿದ್ದು, ಸಚಿವಾಲಯದ ರೀಜನಲ್ ಎಂಪವರ್ಡ್ ಕಮಿಟಿಯು ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ನೀಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಘಟ್ಟ ಪ್ರದೇಶದ ರಸ್ತೆಯ ಅಕ್ಕಪಕ್ಕ ವ್ಯಾಪಕವಾಗಿ ಮರಗಳ ನಾಶ, ಭೂ ಕುಸಿತ, ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆ, ಅಮೂಲ್ಯ ವನಸ್ಪತಿಗಳ ನಾಶ, ಸಂರಕ್ಷಿತ ಅರಣ್ಯ ಎಂಬಿತ್ಯಾದಿ ಗಂಭೀರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಘಟ್ಟದ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಬಾರದು ಎಂದು ಪ್ರಾಧಿಕಾರಕ್ಕೆ ಸೂಚಿಸಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

    10.5 ಕಿ.ಮೀ. ಯಥಾಸ್ಥಿತಿ: ಶಿರಸಿ ತಾಲೂಕಿನ ಸಂಪಖಂಡದಿಂದ ಕುಮಟಾ ತಾಲೂಕಿನ ಕತಗಾಲವರೆಗೆ ರಸ್ತೆ ಅಳತೆಯನ್ನು ಅಗಲದಲ್ಲಿ ಉದ್ದೇಶಿತ 15 ಮೀಟರ್ ಬದಲು 13 ಮೀಟರ್​ನಷ್ಟೇ ವಿಸ್ತರಣೆ ಮಾಡುವಂತೆ ಹಾಗೂ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬರುವ ದೇವಿಮನೆ ಹಾಗೂ ಬಂಡಲ ಘಟ್ಟ ಪ್ರದೇಶದ 10.5 ಕಿ.ಮೀ. ವ್ಯಾಪ್ತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಿಳಿಸಿದೆ ಎನ್ನಲಾಗಿದೆ. ಸಚಿವಾಲಯದ ಈ ಸೂಚನೆಯಿಂದ ಸಾವಿರಾರು ಮರಗಳ ಹನನ ತಪ್ಪುವುದಲ್ಲದೆ, ಭವಿಷ್ಯದಲ್ಲಿ ಘಟ್ಟ ಪ್ರದೇಶದಲ್ಲಿ ಭೂ ಕುಸಿತದ ಆತಂಕವನ್ನು ನಿವಾರಿಸುವಂತಹುದಾಗಿದೆ. ಇದು ಘಟ್ಟದ ಉಳಿವಿಗಾಗಿ ನಿರಂತರ ಹೋರಾಡುತ್ತಿದ್ದ ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ.

    5 ಸಾವಿರ ಮರಗಳ ನಾಶ: ಪಶ್ಚಿಮಘಟ್ಟದಲ್ಲಿ ಹಾದು ಹೋಗುವ ಈ ಯೋಜನೆಯಿಂದ ಅಂದಾಜು 5 ಸಾವಿರ ಮರಗಳು ನಾಶವಾಗಲಿವೆ ಎಂಬುದು ಅರಣ್ಯ ಇಲಾಖೆಯ ಅಧಿಕೃತ ಮಾಹಿತಿ. ವಿಶೇಷವಾಗಿ ಸಳ್ಳೆ, ಮತ್ತಿ, ಕವಲು ಜಾತಿಯ ಮರಗಳು ಅಗಲೀಕರಣದಲ್ಲಿ ತೆರವಾಗಲಿವೆ. ಅತಿ ಹೆಚ್ಚು ಜೀವ ವೈವಿಧ್ಯ ಇರುವ ದೇವಿಮನೆ ಹಾಗೂ ಬಂಡಲ ಘಟ್ಟ ಪ್ರದೇಶವು ವಿಸ್ತರಣೆಯಿಂದ ಹೊರಗುಳಿಯುವ ಕಾರಣಕ್ಕೆ ನಾಶದ ಪ್ರಮಾಣ ತೀರಾ ಇಳಿಕೆಯಾಗಿದೆ ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯ.

    ಪರಿಸರವಾದಿಗಳ ಸಾಕಷ್ಟು ಒತ್ತಡದ ಪರಿಣಾಮ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ರೀಜನಲ್ ಎಂಪವರ್ಡ್ ಕಮಿಟಿಯು ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿತ್ತು. ಹೀಗಾಗಿ, ದೇವಿಮನೆ ಹಾಗೂ ಬಂಡಲ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ನೀಡಿಲ್ಲ. ಪ್ರಸ್ತುತ ನಿರ್ಬಂಧಗಳನ್ನು ವಿಧಿಸಿ ಅನುಮತಿ ನೀಡಿದೆ. ಘಟ್ಟ ವ್ಯಾಪ್ತಿಯಲ್ಲಿ ರಸ್ತೆ ಮಾಡಲು ಅವಕಾಶವಿದ್ದರೂ ಈಗಿರುವ ಅಳತೆಯಲ್ಲಿಯೇ ಮಾಡಬೇಕೇ ವಿನಾ ಹೆಚ್ಚುವರಿ ವಿಸ್ತರಿಸುವಂತಿಲ್ಲ ಎಂದು ಸೂಚಿಸಲಾಗಿದೆ.
    | ಹೆಸರು ಹೇಳಲಿಚ್ಛಿಸದ ಅರಣ್ಯ ಅಧಿಕಾರಿ

    ರೂ. 360 ಕೋಟಿಯ ಯೋಜನೆ: ಹಾವೇರಿ- ಎಕ್ಕಂಬಿ (ರಾಜ್ಯ ಹೆದ್ದಾರಿ-2) ಹಾಗೂ ಎಕ್ಕಂಬಿಯಿಂದ ಕುಮಟಾ, ಬೇಲೇಕೇರಿ (ರಾಜ್ಯ ಹೆದ್ದಾರಿ-69ವರೆಗಿನ ರಸ್ತೆ ) ಮಾರ್ಗವು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಮೊದಲ ಪ್ಯಾಕೇಜ್​ನಲ್ಲಿ ಶಿರಸಿ- ಕುಮಟಾವರೆಗಿನ 60 ಕಿ.ಮೀ. ಅಭಿವೃದ್ಧಿ ಆಗಲಿದೆ. ಸಾಗರಮಾಲಾ ಯೋಜನೆಯಡಿ ಮಂಜೂರಾಗಿರುವ ಬೃಹತ್ ಕಾಮಗಾರಿ ಟೆಂಡರನ್ನು 360.60 ಕೋಟಿ ರೂ. ಮೊತ್ತಕ್ಕೆ ಆರ್.ಎನ್.ಎಸ್. ಇನ್ಪಾ›ಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ಗುತ್ತಿಗೆ ಪಡೆದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts