More

    ದೇವಸ್ಥಾನಗಳ ಆಸ್ತಿ ಸರ್ವೇ ನನೆಗುದಿಗೆ!

    ಬೆಳಗಾವಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಿಗೆ ಸೇರಿದ ಆಸ್ತಿ ಸರ್ವೇ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ದೇವಸ್ಥಾನ ಒಡೆತನದ ಆಸ್ತಿಗಳು ಕಂಡವರ ಪಾಲಾಗುತ್ತಿವೆ.

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎ,ಬಿ ಮತ್ತು ಸಿ ಕೆಟಗರಿಯ ಒಟ್ಟು 3,806 ದೇವಸ್ಥಾನಗಳ ಆಸ್ತಿಗಳು ನಿರ್ವಹಣೆ, ಸಂರಕ್ಷಣೆ ಇಲ್ಲದೆ ಹಾಳಾಗಿವೆ. ಆಯಾ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು, ಪೂಜಾರಿಗಳು ನಿರ್ಲಕ್ಷೃದಿಂದಾಗಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಅದನ್ನು ತಪ್ಪಿಸಿ ಆಸ್ತಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ 2021ರಲ್ಲಿ ಮುಜರಾಯಿ ಇಲಾಖೆ ಎಲ್ಲ ದೇವಾಲಯಗಳ ಸರ್ವೆ ಮಾಡಲು ಆದೇಶಿಸಿತ್ತು. ಆದರೆ, ಸರ್ವೇ ಮಾಡಲು ಆಯಾ ದೇವಸ್ಥಾನಗಳು ಇಲಾಖೆಗೆ ಮುಂಗಡವಾಗಿ ಹಣ ಕಟ್ಟಿಲ್ಲ. ಅಲ್ಲದೆ, ಮುಜರಾಯಿ ಇಲಾಖೆಯು ಸರ್ವೇಗಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಮತ್ತೊಂದೆಡೆ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣದಿಂದಾಗಿ ಜಿಲ್ಲೆಗಳಲ್ಲಿ ದೇವಾಲಯಗಳ ಆಸ್ತಿ ಸಮೀಕ್ಷೆ ನಡೆಯದಿರುವುದು ಪ್ರಮುಖ ಕಾರಣ ಎನ್ನಲಾಗಿದೆ.

    ಪ್ರಸ್ತುತ ದಿನಗಳಲ್ಲಿ ಜಿಲ್ಲೆಯ ಎ ಮತ್ತು ಬಿ ಕೆಟಗರಿಯ ದೇವಾಲಯಗಳ ಒಡೆತನದಲ್ಲಿರುವ ವಾಣಿಜ್ಯ ಮಳಿಗೆಗಳು, ಕಟ್ಟಡಗಳು, ವಿವಿಧ ಆಸ್ತಿಗಳ ಮೂಲಗಳಿಂದ ಮಾಸಿಕ ಲಕ್ಷಾಂತರ ರೂ. ಆದಾಯ ಬಾಡಿಗೆ ರೂಪದಲ್ಲಿ ಬರುತ್ತಿದೆ. ಆದರೆ, ದೇವಸ್ಥಾನಗಳ ಆಡಳಿತ ಮಂಡಳಿ, ಪೂಜಾರಿಗಳ ನಡುವಿನ ವೈಮನಸ್ಸು, ಸಮನ್ವತೆ ಕೊರತೆಯಿಂದಾಗಿ ಆದಾಯ ಸೋರಿಕೆಯಾಗುತ್ತಿದೆ. ಮತ್ತೊಂದೆಡೆ ದೇವಾಲಯಗಳ ಹೆಸರಿನಲ್ಲಿ ನೂರಾರು ಎಕರೆ ಆಸ್ತಿ ಇದ್ದು, ನಿರ್ವಹಣೆ ಇಲ್ಲದೆ ಒತ್ತುವರಿಯಾಗಿವೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯು ಎಲ್ಲ ದೇವಾಲಯಗಳ ಆಸ್ತಿಗಳ ಸಂರಕ್ಷಣೆ, ಆದಾಯ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸರ್ವೇ ನಡೆಸಲು ಕ್ರಮ ವಹಿಸಿದೆ. ಆದರೆ, ಸರ್ವೇ ಮಾತ್ರ ಆರಂಭವಾಗಿಲ್ಲ.

    ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಗುಳುಂ: ಬ್ರಿಟಿಷರು, ರಾಜ ಮಹಾರಾಜರ ಕಾಲದಲ್ಲಿ ಆಯಾ ಗ್ರಾಮ ದೇವತೆ ದೇವಾಲಯಗಳಿಗಾಗಿ ಭೂಮಿ ಮೀಸಲಿಟ್ಟಿದ್ದರು. ಕೆಲ ರಾಜರು ನೂರಾರು ಎಕರೆ ದಾನ ಮಾಡಿದ್ದರು. ಅಲ್ಲದೆ, ಕೆಲವೆಡೆ ದೇವಾಲಯಗಳ ನಿರ್ವಹಣೆಗಾಗಿಯೇ ಕೃಷಿ ಜಮೀನುಗಳನ್ನು ಆಸ್ತಿಯನ್ನಾಗಿ ಮೀಸಲಿಟ್ಟಿದ್ದರು. ಆದರೆ, 1950ರಿಂದ ಬಳಿಕ ದೇವಾಲಯಗಳಿಗೆ ಮೀಸಲಿಟ್ಟಿರುವ ನೂರಾರು ಎಕರೆ ಆಸ್ತಿಯನ್ನು ಆಯಾ ದೇವಾಲಯಗಳ ಪೂಜಾರಿಗಳು ಹಂಚಿಕೊಂಡು ಮಾರಾಟ ಮಾಡಿದ್ದಾರೆ. ಕೆಲವರು ದೇವಸ್ಥಾನಗಳ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡಿದ್ದಾರೆ.

    ಮುಜರಾಯಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ದೇವಾಲಯಗಳ ಆಸ್ತಿ ಸಂರಕ್ಷಣೆ ಸಾಧ್ಯ. ಅಲ್ಲದೆ, ವಾರ್ಷಿಕ ಭಕ್ತರಿಂದ ಕೋಟ್ಯಂತರ ರೂ. ದೇಣಿಗೆ ರೂಪದಲ್ಲಿ ದೇವಾಲಯಗಳಿಗೆ ಆದಾಯ ಬರುತ್ತದೆ ಎಂದು ಭಕ್ತರಾದ ವಿಠ್ಠಲ ಪಾಟೀಲ, ಮಾರುತಿ ನಾಯಕ್, ರಾಹುಲ ಗೌಡಪ್ಪ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

    ಈಗಾಗಲೇ ರಾಜ್ಯದಲ್ಲಿ ದೇವಾಲಯಗಳಿಗೆ ಸೇರಿದ ಆಸ್ತಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಆಸ್ತಿಗಳ ಕುರಿತು ಸರ್ವೇ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ, ಕೆಲ ಸಮಸ್ಯೆಗಳಿಂದಾಗಿ ಇದೀಗ ಪ್ರತ್ಯೇಕ ಸರ್ವೇ ಕೈಬಿಡಲಾಗಿದೆ. ಕಂದಾಯ ಇಲಾಖೆ ನಡೆಸುತ್ತಿರುವ ಡ್ರೋನ್ ಸರ್ವೇ ಜತೆಗೆ ದೇವಾಲಯಗಳ ಆಸ್ತಿ ಸರ್ವೇ ನಡೆಸುವ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ.
    | ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆ ಸಚಿವೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts