More

    ದೇಗುಲಗಳು ಮನಸ್ಸಿನ ಚಾರ್ಜಿಂಗ್ ಕೇಂದ್ರಗಳು: ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ

    ಸೊರಬ: ಸುಖದ ಬೆನ್ನುಬಿದ್ದರೆ ಸಾವಿರಾರು ಸಂಕಟಗಳು ಬಂದೆರಗುತ್ತವೆ. ಇರುವುದನ್ನು ಆನಂದವಾಗಿ ಅನುಭವಿಸಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಜಡೆ ಹೋಬಳಿಯ ತಾಳಗುಪ್ಪ ಗ್ರಾಮದಲ್ಲಿ ಸೋಮವಾರ ಈಶ್ವರ ಹಾಗೂ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
    ಮನುಷ್ಯ ತಾನು ಸುಖವಾಗಿ ಇರಬೇಕು, ತನ್ನ ಸುಖವೇ ಬಹು ಮುಖ್ಯವೆಂದು ಹಲವು ಬೇಕು, ಬೇಡವಾದ ಕೆಲಸ ಮಾಡುತ್ತ ಸಂಕಷ್ಟಗಳನ್ನು ಎದುರಿಸುತ್ತಾನೆ. ದೇವರ ಒಲುಮೆಗೆ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ದೇಹ ಶುದ್ಧಿಗೆ ಸ್ನಾನ ಮಾಡುವಂತೆ ಮನಸ್ಸಿನ ಶುದ್ಧಿಗೆ ಪ್ರತಿದಿನ ದೇವಾಲಯಕ್ಕೆ ಬರಬೇಕು. ನಾವು ಬಳಸುವ ಮೊಬೈಲನ್ನು ಹೇಗೆ ನಿತ್ಯವೂ ಚಾರ್ಜ್ ಮಾಡುತ್ತೇವೆಯೋ ಹಾಗೆಯೇ ನಮ್ಮ ದೇವಾಲಯಗಳು ಮನಸ್ಸನ್ನು ಚಾರ್ಜ್ ಮಾಡುವ ಶಕ್ತಿಕೇಂದ್ರಗಳಾಗಿವೆ ಎಂದರು.
    ನಿತ್ಯ ಸ್ನಾನ ಮಾಡಿ ದೇವರ ಸಾನಿಧ್ಯದಲ್ಲಿ ಒಂದಷ್ಟು ಸಮಯ ಧ್ಯಾನ ಮಾಡಬೇಕು. ಭಗವಂತ ನಮ್ಮೆಲ್ಲ ಸಂಕಟಗಳನ್ನು ತನ್ನ ಕೃಪಾ ದೃಷ್ಟಿಯಿಂದಲೇ ಪರಿಹರಿಸುತ್ತಾನೆ. ನಮ್ಮಲ್ಲಿ ಅಂತಹ ಭಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಸದೃಢರನ್ನಾಗಿ ಮಾಡಬೇಕು ಎಂದರು.
    ಭಕ್ತಿಯಿಂದ ದೇವರನ್ನು ಆರಾಧಿಸಬೇಕು. ಜಗತ್ತಿನಲ್ಲಿ ದೇವರ ಆಜ್ಞೆ ಇಲ್ಲದೆ ಒಂದು ಕಡ್ಡಿಯೂ ಮಿಸುಕಾಡದು. ಈಗ ಸಿಕ್ಕದ್ದೆಲ್ಲವೂ ದೇವರ ಕೃಪೆ ಎಂದುಕೊಂಡು ಆಸ್ವಾದಿಸಬೇಕು ಎಂದು ಸಾನ್ನಿಧ್ಯ ವಹಿಸಿದ್ದ ಮಹಾರಾಷ್ಟ್ರದ ಹಣೆಗಾಂ ಹಿರೇಮಠದ ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಜನನಿ ಹಾಗೂ ಜನ್ಮಭೂಮಿ ಯಾವಾಗಲೂ ಅಮೂಲ್ಯ. ಅವುಗಳನ್ನು ಪ್ರೀತಿಸಬೇಕು. ಅಭಿಮಾನ ಹೊಂದಿರಬೇಕು. ಜನ್ಮಭೂಮಿಯ ಪ್ರಗತಿ ನಮ್ಮೆಲ್ಲರ ಪ್ರಗತಿ. ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿಯಿಂದ ಎಲ್ಲರೂ ನಿಮ್ಮ ನಿಮ್ಮ ಮಕ್ಕಳೊಂದಿಗೆ ನಿತ್ಯ ದೇವಾಲಯಕ್ಕೆ ಬರುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts