More

    ದುರಸ್ತಿಗೆ ಕಾದಿರುವ ಕೊಂಡಂಗೇರಿ ಕೊಪ್ಪ ರಸ್ತೆ

    ಸಿದ್ದಾಪುರ: ಕೊಂಡಂಗೇರಿ ಗ್ರಾಮದ ಕೊಪ್ಪ ರಸ್ತೆ ದುರಸ್ತಿ ಕಾಣದೆ ವರ್ಷಗಳು ಕಳೆದಿದ್ದು, ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ಶೇಖರಣೆಗೊಂಡು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

    ಬಡ ಕಾರ್ಮಿಕ ಕುಟುಂಬಗಳೇ ಹೆಚ್ಚು ವಾಸವಿರುವ ಈ ಭಾಗದಲ್ಲಿ, ತಮ್ಮ ನೋವಿಗೆ ಸ್ಪಂದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಅಳಲು. ಹಾಲುಗುಂದ ಗ್ರಾಪಂ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದ ಕೊಪ್ಪ ರಸ್ತೆಯು ಕೊಂಡಂಗೇರಿ ಮುಖ್ಯರಸ್ತೆಯಿಂದ 2 ಕಿ.ಮೀ ಉದ್ದದ ರಸ್ತೆಯಾಗಿದೆ. ಗ್ರಾಮಸ್ಥರು ಈ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಖಐದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಸರುಮಯ ರಸ್ತೆಯಲ್ಲಿಯೇ ಸಂಚರಿಸುವ ಮಕ್ಕಳು ಮತ್ತು ವೃದ್ಧರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಾಹನ ಸವಾರರು ಗುಂಡಿ ಬಿದ್ದ ರಸ್ತೆಯಲ್ಲಿ ವಾಲಾಡುತ್ತಾ ಸವಾರಿ ಮಾಡಬೇಕಾದ ದುಸ್ಥಿತಿ ಬಂದೊದಗಿದೆ.

    ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದ ಇಲ್ಲಿನ ಜನ ಜೀವನ ಸಹಜ ಸ್ಥಿತಿಗೆ ಮರಳಲೇ ಇಲ್ಲ. ಅರ್ಧ ಮುರಿದ ಗೋಡೆಗಳ ನಡುವೆ ಬದುಕು ಸಾಗಿಸುತ್ತಿದ್ದರೂ ಈ ಭಾಗದಿಂದ ಆಯ್ಕೆಯಾದ ಜಿಪಂ ಸದಸ್ಯೆ ಸರಿತಾ ಪೂಣಚ್ಚ ಒಮ್ಮೆಯೂ ಇತ್ತ ಕಡೆ ತಿರುಗಿ ನೋಡೇ ಇಲ್ಲ. ಇನ್ನು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಚುನಾವಣೆ ಸಂದರ್ಭ ಮಾತ್ರ ಗ್ರಾಮಕ್ಕೆ ಪದೇ ಪದೆ ಭೇಟಿ ನೀಡಿ ಮತಯಾಚನೆ ಮಾಡಿದ್ದು ಹೊರತುಪಡಿಸಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದೆ ಇರುವುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಪಂ ಸ್ಥಳೀಯ ಸದಸ್ಯರು ಮಾತ್ರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆ ಪರಿಹಾರ ಸಾಧ್ಯವಾಗುತ್ತಿಲ್ಲ.

    ಅಪೂರ್ಣ ಸೇತುವೆ: ಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ಹೋಗಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ. ಕಾಮಗಾರಿ ವಿಳಂಬಕ್ಕೆ ಕಾರಣವೇನೆಂದು ಗುತ್ತಿಗೆದಾರ ಶಿವದಾಸ್ ಬಳಿ ‘ವಿಜಯವಾಣಿ’ ಮಾಹಿತಿ ಬಯಸಿದಾಗ ‘ಗ್ರಾಮಸ್ಥರ ಸಹಕಾರ ಇಲ್ಲದ ಕಾರಣ ಅಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಶಿವದಾಸ್ ದೂರಿದ್ದಾರೆ. 6 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿಸಲಾಗುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬುದು ಗ್ರಾಮಸ್ಥರ ದೂರು. ಸೇತುವೆ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರ ಪರಿಣಾಮ ರಸ್ತೆಯಲ್ಲಿ ಮಣ್ಣು ತುಂಬಿದ್ದು ಕೆಸರು ಗದ್ದೆಯಂತಾಗಿದೆ. ಕೊಪ್ಪ ಗ್ರಾಮ ಮಾತ್ರವಲ್ಲದೆ ಕೊಂಡಂಗೇರಿ ಭಾಗದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ.

    ಪ್ರವಾಹದ ಸಂದರ್ಭದಲ್ಲಿ ರಸ್ತೆ ಬಹಳ ಹಾಳಾಗಿದೆ. ಮಳೆ ಪರಿಹಾರ ನಿಧಿಯಲ್ಲಿ ಕಾಮಗಾರಿ ಮಾಡಿಸಬೇಕಿತ್ತು. ಕೋವಿಡ್-19ರ ಕಾರಣದಿಂದಾಗಿ ಯಾವುದೇ ಕಾಮಗಾರಿ ಮಾಡಿಸಲು ಸಾಧ್ಯವಾಗಲಿಲ್ಲ. ಇದೀಗ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದೆ. ಮುಂದಿನ ಆಡಳಿತ ಮಂಡಳಿ ತೀರ್ಮಾನದ ಬಳಿಕವೇ ರಸ್ತೆ ಕಾಮಗಾರಿ ಮಾಡಿಸಲು ಸಾಧ್ಯ.
    ಕಾಂಚನಾ, ಪಿಡಿಒ, ಗ್ರಾಪಂ. ಹಾಲುಗುಂದ

    ಗ್ರಾಪಂ ಅನುದಾನದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಾಡಿಸಲಾಗಿದೆ. ಉಳಿದಂತೆ ವಿಶೇಷ ಅನುದಾನದಲ್ಲಿ ಕೆಲಸಗಳು ಆಗಬೇಕಿದೆ. ಕಳೆದ ವರ್ಷದ ಪ್ರವಾಹದಿಂದ ಯಾವುದೇ ಕಾಮಗಾರಿಗಳನ್ನು ಮಾಡಿಸಲು ಸಾಧ್ಯವಾಗಲಿಲ್ಲ. ಮಳೆ ಹಾನಿ ಪರಿಹಾರದಲ್ಲಿ ರಸ್ತೆ ಕಾಮಗಾರಿ ಮಾಡಿಸಬೇಕಿದೆ.
    ಸಾದುಲಿ, ಅಧ್ಯಕ್ಷ ಗ್ರಾಪಂ ಹಾಲುಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts