More

    ದಿಗಂಬರ ಜೈನ ಸಮಾಜದಿಂದ ಪ್ರತಿಭಟನೆ, ಪವಿತ್ರ ಕ್ಷೇತ್ರ ಸಮ್ಮೇದಗಿರಿ ಉಳಿಸಲು ಆಗ್ರಹ

    ಹುಬ್ಬಳ್ಳಿ: ಜಾರ್ಖಂಡ ರಾಜ್ಯದ ಗಿರಡಿ ಜಿಲ್ಲೆಯ ಶ್ರೀ ಸಮ್ಮೇದಗಿರಿಯು ಜೈನರ ಪರಮೋಚ್ಚ ಮತ್ತು ಪವಿತ್ರ ತೀರ್ಥವಾಗಿದ್ದು, ಇದನ್ನು ಕೇಂದ್ರಿಯ ವನ ಮಂತ್ರಾಲಯವು ಪ್ರವಾಸಿ ತಾಣ ಎಂದು ಘೋಷಿಸಿದೆ. ಇದನ್ನು ವಿರೋಧಿಸಿ ದಿಗಂಬರ ಜೈನ ಸಮಾಜದ ವತಿಯಿಂದ ಡಿ. 21ರಂದು ನಗರದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮಾಜಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ಜೈನ ಸಮಾಜದಿಂದ ಜೈನ ತೀರ್ಥಗಳ ರಾಜ ಎಂದು ಸಮ್ಮೇದಗಿರಿಯು ಮನ್ನಿಸಲ್ಪಟ್ಟಿದೆ. ಪ್ರವಾಸಿ ತಾಣ ಘೋಷಣೆ ಮೂಲಕ ಈ ಕ್ಷೇತ್ರದ ಪವಿತ್ರತೆಗೆ ಧಕ್ಕೆ ತರುವ ತೀಮಾನವನ್ನು ಸರ್ಕಾರ ಕೈಗೊಂಡಿದೆ. ಕೂಡಲೇ ಇದನ್ನು ರದ್ದು ಪಡಿಸಿ ಜೈನ ಪವಿತ್ರ ಕ್ಷೇತ್ರವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

    ಜೈನರು ಆರಾಧಿಸುವ ತೀರ್ಥಂಕರರಲ್ಲಿ 20 ಜನ ತೀರ್ಥಂಕರರು ಈ ಕ್ಷೇತ್ರದಿಂದ ಮೋಕ್ಷ ಪಡೆದಿದ್ದಾರೆ. ಸರ್ಕಾರ ಪ್ರವಾಸಿ ತಾಣ ಮಾಡಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ಆ ಸ್ಥಳ ಪ್ರವಾಸಿ ತಾಣವಾಗಿ ಮಾಡುವುದರಿಂದ ಜೈನ ಸಮಾಜದ ಮೌಲ್ಯಗಳಿಗೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಪವಿತ್ರ ಸ್ಥಳವನ್ನು ಅಪವಿತ್ರ ಮಾಡಲಾಗುತ್ತಿದೆ. ಜಾರ್ಖಂಡ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಕ್ಷಣ ಈ ಆದೇಶ ರದ್ದುಪಡಿಸಿ ಪವಿತ್ರ ಸ್ಥಳವಾಗಿ ಉಳಿಸಿಕೊಳ್ಳಬೇಕು ಎಂದರು.

    ಡಿ. 21ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ ಮಹಾವೀರ ಗಲ್ಲಿ ಶಾಂತಿನಾಥ ಭವನದಿಂದ ಮೌನ ಪ್ರತಿಭಟನೆ ಆರಂಭವಾಗಿ ದುರ್ಗದ ಬೈಲ್, ಬ್ರಾಡವೇ, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ಚನ್ನಮ್ಮ ವೃತ್ತದ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ ತಾಳಿಕೋಟಿ, ಆರ್.ಟಿ. ತವನಪ್ಪನವರ, ವಿನೋದ ಕಾಳೆಗುಡ್ಡಿ, ಅನಿಲ ಬೀಳಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts