More

    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಅಭಿಯಾನ -ಜಿ.ಬಿ. ವಿನಯ್‌ಕುಮಾರ್ ಹೇಳಿಕೆ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ಯಾರಂಟಿ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಹೇಳಿದರು.
    ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಜತೆಯಲ್ಲೇ ಅಭಿಯಾನ ನಡೆಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅಭಿಯಾನದ ಪ್ರಯುಕ್ತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಜನರನ್ನೊಳಗೊಂಡ ತಂಡ ರಚಿಸಲಾಗಿದ್ದು, ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿದೆಯೋ? ಇಲ್ಲವೋ? ಎಂಬ ಬಗ್ಗೆ ಅಂಕಿ ಅಂಶಗಳೊಂದಿಗೆ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
    ಜತೆಗೆ, ಎಲ್ಲ ಗ್ರಾಮಗಳ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳು, ಗ್ರಂಥಾಲಯಗಳ ಸ್ಥಿತಿಗತಿ ಹಾಗೂ ಮೂಲಸೌಲಭ್ಯಗಳ ಬಗ್ಗೆಯೂ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದರು.
    ಪಾದಯಾತ್ರೆ ಸಮಾರೋಪ: ವಿನಯ ಮಾರ್ಗ ಟ್ರಸ್ಟ್‌ನಿಂದ ಕ್ಷೇತ್ರದ ಜಗಳೂರು ತಾಲೂಕಿನ ಚಿಕ್ಕಉಜ್ಜಿನಿ ಗ್ರಾಮದಿಂದ ಹಮ್ಮಿಕೊಂಡಿದ್ದ ‘ವಿನಯ ನಡಿಗೆ ಹಳ್ಳಿ ಕಡೆಗೆ’ ಪಾದಯಾತ್ರೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದ್ದು, ಜ.29ರಂದು ಕೊಗ್ಗನೂರಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
    ಸುಮಾರು 650 ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ 285 ಹಳ್ಳಿಗಳಿಗೆ ಭೇಟಿ ನೀಡಿದ್ದು, ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳ ಶಿಕ್ಷಣ, ನಿರುದ್ಯೋಗ, ನೀರಾವರಿ ಹಾಗೂ ಮಹಿಳೆಯರ ಸಮಸ್ಯೆ ಅರಿತಿದ್ದೇನೆ. ಪರಿಹಾರ ಮಾರ್ಗಗಳ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರು.
    ಪಾದಯಾತ್ರೆ ಸಂದರ್ಭದಲ್ಲಿ ಬಹಳಷ್ಟು ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದು ಕಂಡುಬಂದಿದೆ. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಇನ್ನು ಚನ್ನಗಿರಿ ಹಾಗೂ ಮಾಯಕೊಂಡ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. ಗ್ರಾಮಗಳಿಗೆ ಬಸ್ ಸೌಲಭ್ಯ ಹಾಗೂ ಏತ ನೀರಾವರಿ ತ್ವರಿತ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.
    ಬದಲಾವಣೆ ಬಯಸಿದ ಜನತೆ:
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿದ್ದು, ನವ ಯುವಕರು ಹಾಗೂ ಕೆಲಸ ಮಾಡುವವರು ಬರಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ತಿಳಿಸಿದರು.
    ಕೆಪಿಸಿಸಿಯಲ್ಲಿ ಟಿಕೆಟ್ ನೀಡಲು ಶೇ.80ರಷ್ಟು ಸಮೀಕ್ಷೆಗೆ ಆದ್ಯತೆ ನೀಡಲಿದ್ದಾರೆ. ಕ್ಷೇತ್ರದಲ್ಲಿ ನಾನು ಸೂಕ್ತ ಅಭ್ಯರ್ಥಿ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts