More

    ದಾವಣಗೆರೆ ಬಿಜೆಪಿ ಸಭೆಯಲ್ಲಿ ಗೊಂದಲ

    ದಾವಣಗೆರೆ: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಕರೆದಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಒಳಗಾಯಿತು.
    ಪ್ರಚಾರ ಮಾಡುವ ವಿಚಾರವಾಗಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕೆಲವರು ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಭೆ ಹೊರಗೆ ಬಂದು ರಸ್ತೆಯಲ್ಲಿ ಕೂಗಾಡಿದರು.
    ಇತ್ತ ಸಭೆಯಲ್ಲಿ ಮಾತನಾಡಿದ ಪಾಲಿಕೆ ಚುನಾವಣೆ ವೇಳೆ ಪಕ್ಷಕ್ಕೆ ದ್ರೋಹ ಮಾಡಿದ ಮೂವರು, ವಿಧಾನಸಭೆ ಚುನಾವಣೆಯಲ್ಲೂ ಕುತಂತ್ರ ಮಾಡಿದರು. ಪಕ್ಷ ವಿರೋಧವಾಗಿ ವಾಟ್ಸಾಪ್ ಸಂದೇಶವನ್ನು ಹರಿಬಿಡುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣರಾದರು. ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿ ಮತಗಳ ಕಡಿಮೆ ಆಗಿದ್ದೇಕೆ ಎಂದು ಯಶವಂತರಾವ್ ಕೂಡ ಕಿಡಿ ಕಾರಿದರು.
    ಈ ನಡುವೆ ಮಾತನಾಡಲು ಎದ್ದು ನಿಂತ ಕೆಲವರು ಆಕ್ಷೇಪಿಸಿದರು. ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸ್ಪರ್ಧೆಯೊಡ್ಡಿದ ನೀನು ನಮ್ಮ ಪಕ್ಷದವನೇ ಅಲ್ಲ ಎಂದು ಯಶವಂತ್ ಕೂಡ ಹೇಳಿದರು. ಈ ಹಂತದಲ್ಲಿ ಗೊಂದಲವಾಯಿತು. ಕಾರ್ಯಕರ್ತರು, ಮುಖಂಡರಲ್ಲಿ ದೂರು, ಸಮಸ್ಯೆಗಳಿದ್ದಲ್ಲಿ ತಮಗೆ ತಿಳಿಸಿದರೆ ರಾಜ್ಯ ನಾಯಕರ ಗಮನಕ್ಕೆ ತರುವುದಾಗಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಹೇಳಿ ಸಮಾಧಾನಪಡಿಸಿದರು.
    ಮಾಯಕೊಂಡ ಕ್ಷೇತ್ರದಲ್ಲಿ 2018ರಲ್ಲಿ ಟಿಕೆಟ್ ಸಿಗದಿದ್ದವರು ರವೀಂದ್ರನಾಥ್ ಅವರ ಮನೆ ಎದುರು ಗಲಾಟೆ ಮಾಡಿದರು. ಅವರನ್ನು ಮತ್ತೆ ಕರೆತಂದು ಮಂಡಳಿಯಲ್ಲಿ ಸ್ಥಾನ ನೀಡಲಾಯಿತು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ ಅಲ್ಲಿ ಬಹು ವರ್ಷದಿಂದ ಕೆಲಸ ಮಾಡಿದ ಮಂಜಾನಾಯ್ಕರಿಗೆ ಯಾವ ಅವಕಾಶವೂ ಸಿಗಲಿಲ್ಲ. ಆದರೂ ಪಕ್ಷ ಹೇಳಿದಂತೆ ಎಲ್ಲರೂ ಕೆಲಸ ಮಾಡಿದೆವು. ಪಕ್ಷದ್ರೋಹವನ್ನು ಸಹಿಸುವುದಿಲ್ಲ. ದಕ್ಷಿಣದಲ್ಲಿ ನಾನೆಂದೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ ಎಂದೂ ಯಶವಂತರಾವ್ ಜಾಧವ್ ಉತ್ತರ ನೀಡಿದರು.
    ಸೋಲಿನಿಂದ ನೊಂದಿದ್ದೇನೆ:
    ನನ್ನಂತಹ ಸಣ್ಣ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಟಿಕೆಟ್ ನೀಡಿತು. ಸ್ಪರ್ಧೆ ನಡುವೆಯೂ ಕಾರ್ಯಕರ್ತರ ಶ್ರಮದಿಂದಾಗಿ 54 ಸಾವಿರ ಮತಗಳು ಬಂದಿವೆ. ಕೆಲ ಸಮಾಜದವರು ಕೊನೆ ಗಳಿಗೆಯಲ್ಲಿ ಭರವಸೆಯಂತೆ ಮತ ನೀಡಲಿಲ್ಲ. ಸೋಲಿನಿಂದ ನಾನು ಮನ ನೊಂದಿದ್ದೇನೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯಕುಮಾರ್ ಹೇಳಿಕೊಂಡರು.
    ಕಾಂಗ್ರೆಸ್ ನಾಯಕರನ್ನು ಹೀನಾಯವಾಗಿ ನಿಂದಿಸಿದ್ದರು. ಅಂಥವರನ್ನು ಕಾಂಗ್ರೆಸ್ ಶಾಲು ಹಾಕಿ ಸ್ವಾಗತಿಸಿತು. ಆದರೆ ನಾವು ಅಂತಹ ಕೆಲಸವನ್ನು ಮಾಡಲಿಲ್ಲ. ನಮ್ಮಲ್ಲಿ ಒಗ್ಗಟ್ಟು ಬಾರದಿದ್ದರೆ ಯಾವ ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸೋಣ ಎಂದು ಹೇಳಿದರು.
    ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಲೋಕೇಶ್ ಸೋತ ನಂತರ ಕ್ಷೇತ್ರದಲ್ಲಿ ಸಂಚರಿಸಲಿಲ್ಲ. ಸೋತ ನಂತರ ಮನೆಯಲ್ಲಿ ಇರುವುದು ರಾಜಕಾರಣವಲ್ಲ. ಕಾರ್ಯಕರ್ತರ ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.
    ಚುನಾವಣೆ ವೇಳೆಯಲ್ಲಾದ ಸಣ್ಣ ತಪ್ಪುಗಳಿಂದ ನಮ್ಮ ನಡುವೆ ವೈಷಮ್ಯಗಳು ಬೇಡ. ಪಕ್ಷದ ವಿರುದ್ಧ ತೊಡೆ ತಟ್ಟುವ ಕೆಲಸವನ್ನು ಯಾರೂ ಮಾಡಬಾರದು ಎಂದರು.
    ಸಭೆಯಲ್ಲಿ ಮುಖಂಡರಾದ ಆನಂದರಾವ್ ಶಿಂಧೆ, ಎಸ್.ಟಿ.ವೀರೇಶ್, ರಾಜನಹಳ್ಳಿ ಶಿವಕುಮಾರ್, ಆರ್.ಎಲ್. ಶಿವಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts