More

    ದಾವಣಗೆರೆ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ -ಯೋಗಜೀವನ ಆರೋಗ್ಯದ ಸೋಪಾನ -ಡಾ. ಜಿ.ಎಂ ಸಿದ್ದೇಶ್ವರ

    ದಾವಣಗೆರೆ: ಜೀವನದಲ್ಲಿ ನಿರಂತರ ಯೋಗಾಭ್ಯಾಸ ಪಾಲಿಸಿದಲ್ಲಿ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ ತಿಳಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸ್ಮಾರ್ಟ್‌ಸಿಟಿ ಲಿಮಿಟೆಡ್, ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ದೇವರಾಜ ಅರಸು ಬಡಾವಣೆಯ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯೋಗ ಪುರಾತನ ಕಾಲದಿಂದ ಬಂದಿದೆ. ಸ್ವಾತಂತ್ರ್ಯ ಬಂದ ನಂತರ ಕಡೆಗಣಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಇದು ಪ್ರಚಲಿತದಲ್ಲಿದೆ ಎಂದರು.
    ಮನುಷ್ಯನಿಗೆ ದೈಹಿಕ-ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಯೋಗವು ಅತ್ಯವಶ್ಯ. ಹಾಗಾಗಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಯೋಗ ಕಲಿಸಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ ಯೋಗವೆಂದರೆ ದೈಹಿಕ ವ್ಯಾಯಾಮ, ಪ್ರಾಣಯಾಮವಲ್ಲ. ಬದಲಾಗಿ ಆಧ್ಯಾತ್ಮದ ಕಡೆಗೆ ಕೊಂಡೊಯ್ಯುವ ಒಂದು ಮಾರ್ಗ. ಜಗತ್ತಿನ ಸುಖ-ಸಂತೋಷದ ಆಶಯವೇ ಯೋಗದ ಮುಖ್ಯ ಉದ್ದೇಶವಾಗಿದೆ. ಇದರಿಂದ ಜನರು ಆರೋಗ್ಯದ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಔಷಧಗಳಿಗೆ ಒಳಗಾಗದೇ ಯೋಗಾಭ್ಯಾಸ ಮಾಡಬೇಕು ಎಂದರು.
    ಮುದ್ರಾ ತಜ್ಞ ಲಕ್ಷ್ಮೀ ಶ್ರೀನಿವಾಸ ಗುರೂಜಿ ಮಾತನಾಡಿ, ಮದುವೆ ಆಗುತ್ತಿಲ್ಲ, ಮಕ್ಕಳಾಗುತ್ತಿಲ್ಲ, ನಮ್ಮ ಮಕ್ಕಳು ಸರಿಯಾಗಿ ಓಡುತ್ತಿಲ್ಲ ಪರಿಹಾರ ನೀಡಿ ಎಂದು ಜನರು ನಮ್ಮಲ್ಲಿಗೆ ಬರುತ್ತಾರೆ. ಇದಾವುದಕ್ಕೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲ. ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಚಿಕಿತ್ಸೆ ಇಲ್ಲ. ಇದೆಲ್ಲದಕ್ಕೂ ಪರಿಹಾರ ಯೋಗದಲ್ಲಿದೆ ್ರ ಎಂದರು.
    ಇಂದು ಯುವಜನತೆ ಬೀಡಿ, ಸಿಗರೇಟ್ ಇತರೆ ದುಶ್ಚಟಗಳಿಗೆ ಬಲಿ ಆಗುತ್ತಿದ್ದಾರೆ. ಇದರಿಂದ ನಮ್ಮ ದೇಹದಲ್ಲಿರುವ ಪಂಚ ಕೋಶಗಳು ಹಾಳಾಗುತ್ತವೆ. ಹಾರ್ಮೋನ್‌ಗಳು ಡ್ಯಾಮೇಜ್ ಆಗುತ್ತವೆ. ಇದರಿಂದ ಮದುವೆ ಆದ ಮೇಲೆ ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳು ಹುಟ್ಟುತ್ತವೆ. ನಿತ್ಯ ಯೋಗ ಮಾಡುವುದರಿಂದ ಈ ಎಲ್ಲ ದೋಷ ಗಳಿಗೆ ನಿವಾರಣೆ ಸಾಧ್ಯ ಎಂದು ಮಾಹಿತಿ ನೀಡಿದರು.
    ಯೋಗಗುರು ವೈದ್ಯಶ್ರೀ ಚನ್ನಬಸವಣ್ಣ ಸ್ವಾಮಿ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು. ಸಾಮೂಹಿಕ ಯೋಗದಲ್ಲಿ ನೂರಾರು ಯೋಗಾಸಕ್ತರು ಹಾಗೂ ನಗರದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾದರು.
    ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಲೀಲಾಜಿ, ಜಿಪಂ ಸಿಇಒ ಸುರೇಶ ಕೆ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಎಸ್ಪಿ ಡಾ.ಅರುಣ್ ಕೆ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್, ಆಯುಷ್ ಇಲಾಖೆ ಅಧಿಕಾರಿ ಡಾ.ಶಂಕರಗೌಡ ಇದ್ದರು.
    ———

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts