More

    ದಾವಣಗೆರೆಯಲ್ಲಿ ಬಸವೇಶ್ವರ-ಅಕ್ಕಮಹಾದೇವಿ ಜಯಂತ್ಯುತ್ಸವ- ಸಮಾಜ ಬದಲಾವಣೆ ಅಗತ್ಯ

    ದಾವಣಗೆರೆ: ಬಸವಣ್ಣ ಸೇರಿ ಎಲ್ಲ ವಚನಕಾರರು ಮೌಢ್ಯಗಳನ್ನು ನಿರಾಕರಣೆ ಮಾಡಿದರು. ಆದರೆ ಮೌಢ್ಯದಿಂದ ಹೊರಬರದೆ ಸಮಾಜ ಬದಲಾವಣೆ ಆಗದಿದ್ದರೆ ಬಸವ ಜಯಂತ್ಯುತ್ಸವ ಮಾಡಿ ಏನು ಪ್ರಯೋಜನವಿದೆ ಎಂದು ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.

    ಶ್ರೀಗುರು ಬಸವಮಂಟಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಹಾಗೂ ಅಕ್ಕಮಹಾದೇವಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಶಿವಶರಣರು ಮೌಢ್ಯಗಳನ್ನು ತೊರೆದರು. ಆದರೆ ಇಂದಿಗೂ ಮರಗಳನ್ನು ಸುತ್ತುವ, ತೀರ್ಥಕ್ಷೇತ್ರಗಳಲ್ಲಿ ಮುಳುಗುವವರು ಹೆಚ್ಚಿದ್ದಾರೆ. ಬಸವಣ್ಣ ವೈದಿಕ ಶಾಹಿತ್ವವನ್ನು ನಿರಾಕರಿಸಿದರು. ನಾವಿಂದು ದ್ವಾರ ಬಾಗಿಲಲ್ಲೇ ಪುರೋಹಿತರನ್ನು ಸ್ವಾಗತಿಸುತ್ತಿದ್ದೇವೆ. ಶುಭ ಕಾರ್ಯಗಳಲ್ಲಿ ಹೋಮ ಮಾಡಿಸುತ್ತಿದ್ದೇವೆ ಎಂದು ವಿಷಾಧಿಸಿದರು.
    ಗುಡಿಗಳಿಂದ ಶೋಷಣೆ ಹೆಚ್ಚಲಿದೆ, ಹೀಗಾಗಿ ದೇಹವೇ ದೇಗುಲ ಆಗಬೇಕೆಂದು ಬಸವಣ್ಣ ಪ್ರತಿಪಾದಿಸಿದರು. ಆದರಿಂದು ಲಿಂಗವಂತರೇ ದೊಡ್ಡ ಮಂದಿರಗಳನ್ನು ಕಟ್ಟಿಸುತ್ತಿದ್ದಾರೆ. ದೇಗುಲಗಳನ್ನು ಕಟ್ಟಿಸುವವರನ್ನು ಕತ್ತೆಗಳು ಎಂದು ಅಂಬಿಗರ ಚೌಡಯ್ಯ ಕೂಡ ವಚನಗಳಲ್ಲಿ ಕಟುವಾಗಿ ಹೇಳಿದ್ದಾರೆ ಎಂದೂ ವಿವರಿಸಿದರು.
    ವಿಧಾನಸಭೆ ಚುನಾವಣೆ ಬಂದಿದೆ. ಯಾರೂ ಸಹ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು. ಕೆಲವು ಪಕ್ಷಗಳು ಕೊಟ್ಟ ವಸ್ತುಗಳನ್ನು ಪಡೆಯುತ್ತೇವೆ. ಪಡೆಯದಿದ್ದರೆ ಅನುಮಾನ ಮಾಡುತ್ತಾರೆ. ಆಮಿಷ ಒಡ್ಡದವರಿಗೆ ಮತ ಹಾಕುತ್ತೇವೆ ಎನ್ನುವುದೂ ಕೂಡ ಆತ್ಮವಂಚನೆ ಆಗಲಿದೆ. ಅದನ್ನು ಮಾಡದಿರಿ ಎಂದರು.
    ಬಸವಣ್ಣನಂತಹ ಗೃಹಸ್ಥರು, ಅಕ್ಕಮಹಾದೇವಿಯಂತಹ ವಿರಕ್ತರು ಅತ್ಯಂತ ವಿರಳ ಆಗಿದ್ದಾರೆ. ಹೀಗಾಗಿ ಬಾಲ್ಯದಿಂದಲೇ ವಚನ ಸಂಸ್ಕಾರ ನೀಡಬೇಕು ಎಂದ ಸ್ವಾಮೀಜಿ, ಸಮಾಜ ಸುಧಾರಕ ಬಸವಣ್ಣನವರ ಅಂತ್ಯ ದುರಂತ ಆಗಿರಬಹುದು. ಸಮಾಜಮುಖಿ ಕೆಲಸ ಮಾಡುವ ಕೆಲವರ ಬದುಕು ಸುಖಾಂತವೂ, ಕೆಲವರದು ದುಃಖಾಂತವೂ ಆಗಿದೆ. ಹಾಗೆಂದು ಸಮಾಜಮುಖಿ ಕೆಲಸಗಳಿಗೆ ಹಿಂದೇಟು ಹಾಕಬಾರದು ಎಂದು ಸೂಚ್ಯವಾಗಿ ಹೇಳಿದರು.
    ಸಾಹಿತಿ ಡಾ.ಬಸವರಾಜ್ ನೆಲ್ಲಿಸರ ಮಾತನಾಡಿ ಶರಣ ಚಳವಳಿ ನಡೆದು 900 ವರ್ಷಗಳು ಕಳೆದಿವೆ. ಅಂದಿನ ಅರಿವಿನ ಚಳವಳಿಗೆ ಕಾಡಿದ ಪ್ರೇತಗಳ ಕಾಟ ಇಂದಿಗೂ ತಪ್ಪಿಲ್ಲ. ಅಂದಿನ ಅನಿಷ್ಠಗಳು ಇಂದು ಮತ್ತಷ್ಟು ವಿಕೃತ ರೂಪ ತಾಳಿವೆ ಎಂದು ವಿಷಾಧಿಸಿದರು.
    ಬಸವಣ್ಣನ ವಚನಗಳನ್ನು ಉದಾಹರಿಸಿದ ಅವರು ಬಸವ ತತ್ವಗಳು ಸತ್ಯದ ಹಕ್ಕನ್ನು ಪ್ರತಿಪಾದಿಸಿವೆಯೇ ಹೊರತು ಬದುಕಿನ ಹಂಗನ್ನಲ್ಲ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಅಂತ್ಯದ ನಿಗೂಢತೆ ಈಗಲೂ ಕಾಡುತ್ತಿವೆ ಎಂದರು.
    ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ ಬಸವಣ್ಣನವರು ಛಂದಸ್ಸು, ಹಳಗನ್ನಡ ವಿರೋಧಿಸಿ ಸರಳ ಕನ್ನಡದಲ್ಲಿಯೇ ವಚನಗಳನ್ನು ಬರೆದರು. ಎಲ್ಲರಲ್ಲೂ ಶೈಕ್ಷಣಿಕ ಪ್ರಜ್ಞೆಗಾಗಿ ಅನುಭವಮಂಟಪ ತೆರೆದರು. ಒಟ್ಟಿಗೆ ಕೂತು ಊಟಮಾಡಲು ಮಹಾಮನೆ ಆರಂಭಿಸಿದರು ಎಂದರು.
    ಬಸವಣ್ಣನವರು ಮೊಟ್ಟಮೊದಲು ವಿಚಾರಗಳ ಚರ್ಚೆಗೆ ಅನುಭವಮಂಟಪ ಆರಂಭ ಮಾಡಿದ್ದರು. ಇಂದು ಸಂಸತ್ತಿನ ಎದುರು ಅವರ ಪ್ರತಿಮೆ ಮಾಡಿ ನಿಲ್ಲಿಸಿದ್ದೇವೆ. ಸಂಸತ್ತಿನ ಕಲಾಪಗಳಲ್ಲಿ ಚರ್ಚೆಯ ಬದಲಾಗಿ ಗಲಾಟೆಯಲ್ಲೇ ಕಾಲಹರಣ ಆಗುತ್ತಿದೆ ಎಂದು ವಿಷಾಧಿಸಿದರು.
    ಕಾರ್ಯಕ್ರಮದಲ್ಲಿ ಬಸವಮಂಟಪದ ಅನುಭಾವಿ ಅನಸೂಯಾದೇವಿ ಟಿ.ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ರಾಜ್ಯ ಕದಳಿ ಮಹಿಳಾ ವೇದಿಕೆ ಉಪ ಸಂಚಾಲಕಿ ಪ್ರಮೀಳಾ ನಟರಾಜ್, ಜಿಲ್ಲಾಧ್ಯಕ್ಷೆ ವಿನೋದಾ ಅಜಗಣ್ಣನವರ್ ಇದ್ದರು. ಕದಳಿ ವೇದಿಕೆ ಸದಸ್ಯಿಣಿಯರಿಂದ ವಚನ ಸಂಗೀತ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts